Friday 10 May 2013

ಬೆಳ್ಳಿ ಪರದೆಯ "ತುತ್ತೂರಿ"


ಬೆಳ್ಳಿ ಪರದೆಯ "ತುತ್ತೂರಿ"


ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸುವ ಬೆರಳೆಣಿಕೆಯ ನಿರ್ದೇಶಕರಲ್ಲಿ ಪಿ. ಶೇಷಾದ್ರಿ ಒಬ್ಬರು. ಮುನ್ನುಡಿ, ಅತಿಥಿ, ಬೇರು, ಇತ್ಯಾದಿ ಉತ್ತಮ ಸದಭಿರುಚಿಯ ಚಿತ್ರಗಳನ್ನು ನೀಡಿರುವ ಶೇಷಾದ್ರಿಯವರಿಂದ ನಿರ್ದೇಶಿಸಲ್ಪಟ್ಟ ಮತ್ತೊಂದು ಉತ್ತಮ ಚಿತ್ರ “ತುತ್ತೂರಿ”. ಇದು ಮಕ್ಕಳ ಚಿತ್ರ. ಮಕ್ಕಳು ಮಾತ್ರವಲ್ಲ, ಮಕ್ಕಳ ಮನಸ್ಸಿನ ದೊಡ್ಡವರು, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾರದ ದೊಡ್ಡವರು – ಹೀಗೆ ಎಲ್ಲರೂ ನೋಡಬಹುದಾದ ಮತ್ತು ನೋಡಲೇ ಬೇಕಾದ ಚಿತ್ರ -”ತುತ್ತೂರಿ”.
ನಗರಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ಇಲ್ಲವೇ ಇಲ್ಲ ಎನ್ನಬಹುದು. ಇರುವ ಕೆಲವೇ ಮೈದಾನಗಳನ್ನು ಪಾರ್ಕುಗಳಾಗಿ ಬದಲಾಯಿಸುತ್ತಿದ್ದಾರೆ. ಹಿಗಾದರೆ ಮಕ್ಕಳು ಎಲ್ಲಿ ಆಡಬೇಕು? ಮನೆಯೊಳಗೇ ಕುಳಿತುಕೊಂಡು ಟಿವಿ ನೋಡುವುದು ಮತ್ತು ಕಂಪ್ಯೂಟರ್‍ ಗೇಮ್ ಆಡುತ್ತ ಕುಳಿತುಕೊಳ್ಳಬೇಕೇ? ಇಂತಹ ಒಂದು ಸಮಕಾಲೀನ ಸಮಸ್ಯೆಯನ್ನು ಕೈಗೆತ್ತಿಕೊಂಡು ಶೇಷಾದ್ರಿಯವರು ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಕಥೆಯ ಸಾರಾಂಶವನ್ನು ಅದರ ಅಂತರಜಾಲ ತಾಣದಲ್ಲಿ ಓದಬಹುದು (ಅದು ಇಂಗ್ಲೀಶಿನಲ್ಲಿದೆ. ಕನ್ನಡ ಚಿತ್ರಕ್ಕೆ ಕನ್ನಡದಲ್ಲಿ ತಾಣ ನಿರ್ಮಿಸಬಹುದಿತ್ತು). ಆದುದರಿಂದ ಕಥೆಯನ್ನು ಇಲ್ಲಿ ನೀಡುತ್ತಿಲ್ಲ.
ಚಿತ್ರದ ನಿರ್ಮಾಪಕಿ ಶ್ರೀಮತಿ ಜಯಮಾಲ. ಛಾಯಾಗ್ರಹಣ ರಾಮಚಂದ್ರ. ಸಂಗೀತ ಹಂಸಲೇಖ. ಕಥೆ ಜೆ ಎಂ ಪ್ರಹ್ಲಾದ. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಚೊಕ್ಕವಾಗಿ ದುಡಿದಿದ್ದಾರೆ. ಚಿತ್ರಕ್ಕೆ ಈಗಾಗಲೇ ಪ್ರಶಸ್ತಿ, ಹೊಗಳಿಕೆಗಳು ಬಂದಿವೆ. ಕಳೆದ ಮೇ ತಿಂಗಳಿನಲ್ಲೇ ಚಿತ್ರ ತಯಾರಾಗಿದ್ದರೂ ಶಾಲೆಗಳಿಗೆ ರಜೆ ಮತ್ತು ಅದೇ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ಹೊಂದಿಸಿಕೊಳ್ಳುವುದಕ್ಕಾಗಿ ಇದರ ಬಿಡುಗಡೆ ಒಂದು ವರ್ಷ ತಡವಾಗಿ ಆಗಿದೆ.
ಚಿತ್ರದ ಸಂಗೀತ ಮಕ್ಕಳಿಗೆ ಖುಶಿ ಕೊಡುವಂತಿದೆ. ಎರಡು ಹಾಡುಗಳು ಮತ್ತೆ ಕೇಳುವಂತಿವೆ. ರಾಮಚಂದ್ರರ ಛಾಯಾಗ್ರಹಣ ಚೆನ್ನಾಗಿದೆ. ಆದರೆ ತಾಯಿ ಸಾಹೇಬದಲ್ಲಿ ತೋರಿದ ಪ್ರತಿಭೆ ಕಾಣಿಸಲಿಲ್ಲ.
ವಿರಾಮದ ತನಕ ಚಿತ್ರದ ಓಟ ಸೊಗಸಾಗಿದೆ. ನಂತರ ನಿರ್ದೇಶನದಲ್ಲಿ ಸ್ವಲ್ಪ ಹಿಡಿತ ಕಡಿಮೆ ಆದಂತೆ ಕಂಡು ಬರುತ್ತದೆ. ಶೇಷಾದ್ರಿಯವರು ಪ್ರಹ್ಲಾದರ ಕಥೆಯನ್ನು ನೇರವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಯಾವುದೇ ತಂತ್ರದ ಬಳಕೆ ಮಾಡಿಲ್ಲ. ನಿರೂಪಣಾ ವಿಧಾನದ ಬಳಕೆಯಿಂದ ಮಕ್ಕಳಿಗೆ ಚಿತ್ರ ನೋಡಲು ಯಾವುದೇ ತೊಡಕು ಉಂಟಾಗದು. ಮಕ್ಕಳಿಗೆ ಖಂಡಿತವಾಗಿಯೂ ಮುದ ನೀಡುವ ಚಿತ್ರ.

No comments:

Post a Comment