Tuesday, 21 May 2013

ಎಲ್ಲವೂ ಕನ್ನಡಮಯವಾಗಲಿ ಕಂಪ್ಯೂಟರ್ ಕೂಡ..


*ಕನ್ನಡರತ್ನ ಸತೀಶ್
Kannada computer, Computer Kannadaಯಾವುದೇ ಒಂದು ಭಾಷೆಯ ಉಳಿವು. ಆ ಭಾಷೆಯ ಸಮರ್ಥ ಬಳಕೆಯನ್ನು ಮಾತ್ರವೇ ಅವಲಂಬಿಸಿರುತ್ತದೆ. ಎಲ್ಲ ಭಾಷೆಗಳಿಗೂ ಬೇರು ಎಂದು (ಈ ಬಗ್ಗೆ ಜಿಜ್ಞಾಸೆಯೂ ಇದೆ) ಹೇಳಲಾಗುವ ಸಂಸ್ಕೃತದ ಅತ್ಯಂತ ಶ್ರೀಮಂತ ಭಾಷೆ. ಪಂಡಿತರ ಭಾಷೆಯಾಗಿದ್ದ ಸಂಸ್ಕೃತ ಬಳಸುವ ಜನರಿಲ್ಲದೆ ಇಂದು ಕಣ್ಮರೆಯಾಗಿಯೇ ಬಿಟ್ಟಿದೆ.  ಇಂದು ಅಂಥ ಒಂದು ಸ್ಥಿತಿಯನ್ನು ಕನ್ನಡವೂ ಎದುರಿಸುವಂತಾಗಿದೆ. ಮನೆಯಲ್ಲಿಶಾಲೆಯಲ್ಲಿಕಾಲೇಜಿನಲ್ಲಿ,ಕಾರ್ಪೊರೇಟ್ ಕಚೇರಿಗಳಲ್ಲಿ ಕನ್ನಡ ವಾತಾವರಣ ಮರೆಯಾಗುತ್ತಿದೆ. ಎಲ್ಲವೂ ಆಂಗ್ಲಮಯ. ಹೀಗಾದರೆ ಮುಂದಿನ ದಿನಗಳಲ್ಲಿ ಕನ್ನಡ ಉಳಿದೀತೆ ಎಂಬ ಪ್ರಶ್ನೆ ಸಹಜ.
ಇಂದಿನ ಯುಗಮಾನಕ್ಕೆ ಅನುಗುಣವಾಗಿ ಭಾಷೆ ಬೆಳೆದರೆ ಮಾತ್ರ ಅದು ಉಳಿಯಲು ಸಾಧ್ಯ. ಏನಿದು ಇಂದಿನ ಯುಗಮಾನ. ಇದು ಕಂಪ್ಯೂಟರ್ ಯುಗತಾಂತ್ರಿಕತೆಯ ಯುಗ. ಈಗ ಎಲ್ಲ ವ್ಯವಹಾರಗಳು ನಡೆಯುವುದೇ ಕಂಪ್ಯೂಟರ್‌ನಲ್ಲಿ. ಕ್ಷೇಮ ಶ್ರೀದಿನಾಂಕ ಹಾಕಿ ತೀರ್ಥರೂಪು... ಇವರಿಗೆ ನಮಸ್ಕಾರಗಳುಉಭಯ ಕುಶಲೋಪರಿ ಸಾಂಪ್ರತ. ಇಲ್ಲಿ ಎಲ್ಲರೂ ಕ್ಷೇಮ ಅಲ್ಲಿ ನಿಮ್ಮಗಳ ಕ್ಷೇಮಕ್ಕೆ  ಕಾಗದ ಬರೆಯುವುದು..... ಎಂದು ಆರಂಭಿಸಿ. ಇನ್ನೇನು ವಿಶೇಷವಿಲ್ಲ. ಇಂತಿ ನಮಸ್ಕಾರಗಳು ಎಂದು ಸಂಸ್ಕಾರಪೂರ್ಣವಾಗಿ ಕಾಗದ ಬರೆಯುವ ಪದ್ಧತಿಯೇ ಈಗಿಲ್ಲ.
ಈಗೇನಿದ್ದರೂ ಇ-ಮೇಲ್ಎಸ್.ಎಂ.ಎಸ್.ಗಳ ಕಾರುಭಾರು. ಇಂದು ಪತ್ರ ಎಂದು ಬರೆದರೆ ವಿದ್ಯುನ್ಮಾನ ಅಂಚೆಯ ಮೂಲಕವಷ್ಟೇ. ಹೀಗಾಗಿ ಕನ್ನಡಬಳಕೆ ಕಂಪ್ಯೂಟರ್ಮೊಬೈಲ್‌ಗಳಲ್ಲಿ ಸಾಧ್ಯವಾದರೆ. ಅದು ಸರಳವಾಗಿದ್ದರೆ,ಸರಾಗವಾಗಿದ್ದರೆಸುಲಭವಾಗಿದ್ದರೆ ಮಾತ್ರ ಕನ್ನಡ ಮುಂದಿನ ಪೀಳಿಗೆಗೆ ಉಳಿದೀತು.
ಇದನ್ನು ಅರಿತೇ ಪೂರ್ಣಚಂದ್ರ ತೇಜಸ್ವಿ ಅವರುಡಾ. ಚಂದ್ರಶೇಖರ ಕಂಬಾರರು ತಂತ್ರಜ್ಞಾನದಲ್ಲೂ ಕನ್ನಡ ಪ್ರಸ್ತುತವಾಗಬೇಕು ಎಂದು ಕೂಗಿ ಕೂಗಿಸಾರಿ ಸಾರಿ ಹೇಳಿದ್ದಾರೆ. ಆದರೂ ಈ ನಿಟ್ಟಿನಲ್ಲಿ ಗಣನೀಯ ಪ್ರಗತಿ ಆಗಿಲ್ಲ.
ಯೂನಿಕೋಡ್ ಇಂದಿನ ತಂತ್ರಜ್ಞಾನದ ಅವಿಭಾಜ್ಯ ಅಂಗವಾಗಿದೆ. ಫಾಂಟ್ ಡೌನ್‌ಲೋಡ್ ಮಾಡಿಕೊಳ್ಳದೆಯೇ ಕಂಪ್ಯೂಟರ್‌ನಲ್ಲಿ ಅಂತರ್ಜಾಲದ ನೆರವಿನಿಂದ ಕನ್ನಡವನ್ನು ನೇರವಾಗಿ ಕಾಣುವ ಸೌಲಭ್ಯ ದೊರೆತಿದ್ದೇ ಇದರಿಂದ.  ಆದರೆಯೂನಿಕೋಡ್‌ನಲ್ಲಿ ಸರಳವಾಗಿ ಕನ್ನಡವನ್ನು ಅಚ್ಚು ಮಾಡಿ ಕಂಪ್ಯೂಟರ್‌ನಲ್ಲಿ ಅಳವಡಿಸುವ ಬಗ್ಗೆ ಇನ್ನೂ ಗೊಂದಲವಿದೆ. ಹಲವರಿಗೆ ಇದು ಕಬ್ಬಿಣದ ಕಡಲೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಯೂನಿಕೋಡ್ ವಿಷಯದಲ್ಲಿ ಸಾಕಷ್ಟು ಪ್ರಗತಿ ಸಾಧ್ಯವಾಗಿಲ್ಲ. ಕನ್ನಡ ಭಾಷೆಯಲ್ಲಿ ಹಲವಾರು ತಂತ್ರಾಂಶಗಳಿವೆ. ಈ ತಂತ್ರಾಂಶ ತಯಾರಿಸಿದವರು ತಮಗೆ ಬೇಕಾದ ರೀತಿಯಲ್ಲಿ ಅದನ್ನು ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಒಂದೊಂದು ತಂತ್ರಾಂಶಕ್ಕೆ ಒಂದೊಂದು ರೀತಿಯ ಕೀಲಿಮಣೆ. ಇಂಗ್ಲಿಷ್‌ನಲ್ಲಿ ಇರುವಂತೆ ಏಕರೂಪದ ಕೀಲಿಮಣೆ ವ್ಯವಸ್ಥೆ ಕನ್ನಡದಲ್ಲಿಲ್ಲ. ಈ ಮಧ್ಯೆ ಹಲವು ತಂತ್ರಾಂಶಗಳು ಇವರಿಂದ ಅವರು ಕದ್ದಿದ್ದುಅವರಿಂದ ಇವರು ಕದ್ದಿದ್ದು ಎಂಬ ಆಪಾದನೆಗಳೂ ಇವೆ.
ಇನ್ನು ಸರ್ಕಾರವೇ ಮುಂದೆ ನಿಂತು ಮಾಡಿಸಿದ ನುಡಿ ತಂತ್ರಾಂಶದ ಸೋರ್ಸ್ ಕೋಡ್ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಆಗ ಅದನ್ನು ಬಳಸಿಕೊಂಡು ಕನ್ನಡದಲ್ಲಿಯೇ ಪೂರಕ ಹಾಗೂ ಅಗತ್ಯ ತಂತ್ರಾಂಶ ಅಭಿವೃದ್ಧಿ ಪಡಿಸಲು ಸಾಧ್ಯ ಎಂಬ ಧ್ವನಿ ಕೇಳಿ ಬಂದಿದೆ. ಈ ಬಗ್ಗೆ ಹಲವು ಚರ್ಚೆಲೇಖನಗೋಷ್ಠಿಗಳು ನಡೆದಿವೆ ಆದರೆ ಪ್ರಯೋಜನವಾಗಿಲ್ಲ.
ಕಾಲ ಎಂದಿಗೂ ನಿಲ್ಲುವುದಿಲ್ಲ. ಓಡುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ನಾವು ಹೆಜ್ಜೆಹಾಕಿದಾಗ ಮಾತ್ರ ನಾವೂ ಕಾಲದ ಓಟಕ್ಕೆ ಸಾಗಲು ಸಾಧ್ಯ. ಇಲ್ಲವಾದರೆ ನಾವು ಹಿಂದುಳಿಯುತ್ತೇವೆ. ಕನ್ನಡ ಕಂಪ್ಯೂಟರ್ ಬಳಕೆ ವಿಚಾರದಲ್ಲೂ ಅದೇ ಆಗಿದೆ. ನಮಗೆ ಕಂಪ್ಯೂಟರ್ ಬಂದ ಹೊಸತರಲ್ಲಿ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸುವ ಪರಿಕಲ್ಪನೆ ಇರಲಿಲ್ಲ. ಅದನ್ನು ಬಳಸುವ ಅವಕಾಶ ೧೯೮೬ರಿಂದೀಚೆಗೆ ಆರಂಭವಾಯಿತು. ಆದರೆ ಕನ್ನಡ ಬಳಸುವ ಅಗತ್ಯ ೨ ದಶಕಗಳಿಂದ ವ್ಯಾಪಕವಾಯಿತು. ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಆದರೂ ಇದು ಏನೇನೂ ಸಾಲದು ಎಂಬುದು ತಜ್ಞರ ಅಭಿಮತ.
ಕನ್ನಡ ತಂತ್ರಾಂಶಗಳಲ್ಲಿ ಇಂದಿಗೂ ಹಲವು ಗೊಂದಲ ಇದೆ. ಕೆಲವೊಂದು ಕನ್ನಡ ತಂತ್ರಾಂಶದಲ್ಲಿ ಶ್ರೀ ಎಂದು ಅಚ್ಚು ಮಾಡಿದರೆ ಶ್ರೀಯಲ್ಲಿ ದೀರ್ಘವೂ ಸೇರಿದ ರಾಒತ್ತು ಬಂದ ಬಳಿಕವೂ ಪಕ್ಕದಲ್ಲೊಂದು ದೀರ್ಘ ಇರುತ್ತದೆ. ಯೂನಿಕೋಡ್‌ನ ಕೆಲವು ತಂತ್ರಾಂಶದಲ್ಲಿ ಅರ್ಧಕ್ಷರದ ಬಳಿಕ ಮತ್ತೊಂದು ಅಕ್ಷರ ಬಂದರೆ ಅದು ಒತ್ತಕ್ಷರವಾಗುತ್ತದೆ. ಉದಾಹರಣೆಗೆ ರಾಜ್‌ಕುಮಾರ್ ಎಂದು ಅಚ್ಚು ಮಾಡಿದರೆ ಅದು ರಾಜ್ಕುಮಾರ್ ಆಗುತ್ತದೆ. ಇಂಥ ಚಿಕ್ಕಪುಟ್ಟ ಸಮಸ್ಯೆಗಳನ್ನೂ ಬಗೆಹರಿಸದ ಪರಿಸ್ಥಿತಿ ನಿಜಕ್ಕೂ ಶೋಚನೀಯ.
ಕನ್ನಡದಲ್ಲಿ ಇಂದು ಬಹುತೇಕ ತಂತ್ರಾಂಶಗಳಲ್ಲಿ ಕಾಗುಣಿತದ ಜನ್ಯದಂತೆಯೇ ಅಂದರೆ ಕ ಅ  ಕಕ ಆ ಕಾಕ ಇ ಕಿ.. ಎನ್ನುವಂತೆ ವಿನ್ಯಾಸ ಮಾಡಲಾಗಿದೆ. ಇನ್ನು ಕೆಲವು ತಂತ್ರಾಂಶಗಳಲ್ಲಿ ಹಿಂದಿನ ಟೈಪ್‌ರೈಟರ್ ಕೀಲಿ ಮಣೆ ಇದೆ. ಬರಹದಲ್ಲಿ ಕ ಎಂದು ಬರೆಯಲು ಕೆ ಕೀಲಿ ಒತ್ತಿದ ಬಳಿಕ ಎ ಒತ್ತಬೇಕುಕೆಲವರಿಗೆ ಇದು ಸುಲಭ. ಮತ್ತೆ ಕೆಲವರಿಗೆ ಕೆ ಕೀಲಿ ಒತ್ತಿದ ಕೂಡಲೆ ಕ ಬರುವ ತಂತ್ರಾಂಶ ಸುಲಭ. ಹೀಗಾಗಿಯೇ ಈಗಿನ ತಂತ್ರಾಂಶಗಳಲ್ಲಿ ಎಲ್ಲ ಬಗೆಯ ಕೀಲಿಮಣೆಯ ಅವಕಾಶವನ್ನೂ ಕೊಡುತ್ತಾರೆ. ಯಾರು ಯಾವುದು ಬೇಕೋ ಅದನ್ನು ಬಳಸಬಹುದು. ಆದರೆ ಇಂಗ್ಲಿಷ್‌ನಲ್ಲಿರುವಂತೆ ಒಂದೇ ಮಾದರಿ ಕೀಲಿಮಣೆ ಇದ್ದರೆ ಚೆನ್ನ. ಇನ್ನು ಕೀಲಿಮಣೆಗಳಲ್ಲಿ ಕನ್ನಡದ ಕೀಲಿಮಣೆ ಇರುವ ಕಂಪ್ಯೂಟರ್‌ಗಳೇ ಇಲ್ಲ. ಇದಕ್ಕೆ ಕಾರಣ ಕೀಲಿ ಮಣೆಗಳಲ್ಲಿ ಇರುವ ಗೊಂದಲ. ಹಾಗೆ ಬೇಕಾದವರು ತಮ್ಮ ತಮ್ಮ ತಂತ್ರಾಂಶದ ಸ್ಟಿಕ್ಕರ್ ಅಂಟಿಸಿಕೊಳ್ಳಬೇಕಾದ ಸ್ಥಿತಿ. ಇನ್ನು ಕನ್ನಡದಲ್ಲಿ ಇಂಗ್ಲಿಷ್‌ನಲ್ಲಿರುವಂತೆ ವ್ಯಾಕರಣಕಾಗುಣಿತ ಸರಿಯಿದೆಯೇ ಎಂದು ಪರೀಕ್ಷಿಸುವ ವ್ಯವಸ್ಥೆ ಇಲ್ಲ. ಕೆಲವು ತಂತ್ರಾಂಶದಲ್ಲಿ ನಾವೇ ಕನ್ನಡ ನಿಘಂಟು ಸೇರ್ಪಡೆ ಮಾಡಿಕೊಳ್ಳುವ ಅವಕಾಶ ಇದೆ. ಅದರೆ ಇದು ಬಳಸುವವರ ಸ್ನೇಹಿಯಾಗಿಲ್ಲ. ಎಲ್ಲ ಕಂಪ್ಯೂಟರ್‌ಗಳಲ್ಲೂ ಕನ್ನಡ ನಿಘಂಟು ಅಳವಡಿಸಿದರೆ ಕನ್ನಡದಲ್ಲಿ ತಪ್ಪುಗಳು ಬರುವುದನ್ನು ತಡೆಯಲು ಸಾಧ್ಯ. ಆದರೆ ಈ ಬಗ್ಗೆ ಕಾಲು ಶತಮಾನ ಕಳೆದರೂ ಪ್ರಗತಿ ಆಗದಿರುವುದು ನಿಜಕ್ಕೂ ಶೋಚನೀಯ.
ಬೆಂಗಳೂರು ದೇಶದ ಸಿಲಿಕಾನ್ ನಗರಿ. ಇಡೀ ವಿಶ್ವವೇ ತಂತ್ರಾಂಶ ಎಂದರೆ ಬೆಂಗಳೂರಿನತ್ತ ತಿರುಗಿ ನೋಡುತ್ತದೆ. ಇಲ್ಲಿನ ಕನ್ನಡಿಗರ ಬುದ್ಧಿಗೆ ವಿದೇಶದಲ್ಲಿ ಬಂಗಾರದ ಬೆಲೆ ಇದೆ. ಆದರೂ ಅವರು ಕನ್ನಡ ತಂತ್ರಾಂಶದಲ್ಲಿ ಇಂಥ ಸುಧಾರಣೆ ಮಾಡಿಅದು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡುವ ಪ್ರಯತ್ನ ಮಾಡಿಲ್ಲ. ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸರ್ಕಾರಸಾಹಿತ್ಯ ಸಮ್ಮೇಳನ ನಡೆಸಿ ಕನ್ನಡ ಉಳಿಸಿ ಎನ್ನುವ ಸಾಹಿತ್ಯ ಪರಿಷತ್ತುಕರ್ನಾಟಕ ಸರ್ಕಾರದಲ್ಲಿರುವ ಮಾಹಿತಿ ತಂತ್ರಜ್ಞಾನ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಕನ್ನಡ ತಂತ್ರಾಂಶದಲ್ಲಿ ನಿಘಂಟು ಬಳಕೆಯ ಬಗ್ಗೆ ಗಮನ ಹರಿಸುವುದು  ಅತ್ಯಗತ್ಯ.
ಕನ್ನಡ ಉಳಿಯಲು ಕನ್ನಡ ಬೆಳಗಲು ಇದು. ಅಗತ್ಯ. ಕನ್ನಡನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಎಲ್ಲವೂ ಕನ್ನಡಮಯ ಆಗಬೇಕು. ಕಂಪ್ಯೂಟರ್‌ನಲ್ಲಿ ಕೂಡ ಅಲ್ಲವೇ?

ಡಾ| ರಾಜ್‌ಕುಮಾರ್‌ರವರ ವಿಶೇಷ ಪರಿಚಯ


- ಗಂಗಾಧರ ಮೊದಲಿಯಾರ್

ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಡಾ| ರಾಜ್‌ಕುಮಾರ್ ಅವರದೇ ಒಂದು ಪ್ರತ್ಯೇಕ ಅಧ್ಯಾಯ. ಕನ್ನಡ ಚಿತ್ರರಂಗದ ಪುಟಪುಟವನ್ನೂ ಆವರಿಸಿಕೊಂಡಿರುವ ಡಾ| ರಾಜ್‌ಕುಮಾರ್ (ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ) ಕನ್ನಡ ಚಿತ್ರರಂಗ ಕಂಡ ವರ್ಣರಂಜಿತ ನಾಯಕ ನಟ. ೧೨ ವರ್ಷದ ಬಾಲ ನಟನಾಗಿರುವಾಗಲೇ ಚಲನಚಿತ್ರರಂಗ ಪ್ರವೇಶಿಸಿದ ಡಾ|ರಾಜ್‌ಕುಮಾರ್ ೬೩ ವರ್ಷ ತುಂಬಿರುವ ಕನ್ನಡ ಚಿತ್ರರಂಗದಲ್ಲಿ ೪೩ ವರ್ಷಗಳಿಂದ ಹಾಸುಹೊಕ್ಕಾಗಿದ್ದಾರೆ. ಅವರು ಅಭಿನಯಿಸದ ಪಾತ್ರವೇ ಇಲ್ಲ. ಅವರು ನಡೆದು ಬಂದ ಹಾದಿಯೇ ಒಂದು ಚರಿತ್ರೆ. ಹೀಗಾಗಿ ಭಾರತ ಸರ್ಕಾರ, ಚಲನಚಿತ್ರ ಪಿತಾಮಹ ದಾದಾಸಾಹೇಬ ಫಾಲ್ಕೆ ಅವರ ಹೆಸರಿನಲ್ಲಿ ನೀಡುವ, ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ “ಫಾಲ್ಕೆ ಪ್ರಶಸ್ತಿ” ಯನ್ನು ೧೯೯೬ರಲ್ಲಿ ಡಾ| ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಿದೆ. ಕನ್ನಡ ಚಲನಚಿತ್ರರಂಗದಲ್ಲಿ ಈ ಪ್ರಶಸ್ತಿ ಪಡೆದ ಮೊದಲಿಗರು ಡಾ| ರಾಜ್‌ಕುಮಾರ್.
ಹನ್ನೆರಡು ವರ್ಷದ ಬಾಲಕನಾಗಿರುವಾಗ ಭಕ್ತ ಪ್ರಹ್ಲಾದ (೧೯೪೨) ಚಿತ್ರದಲ್ಲಿ ಬಾಲನಟನಾಗಿ ಎಸ್. ಪಿ. ಮುತ್ತುರಾಜ ಕಾಣಿಸಿಕೊಂಡರು. ನನ್ನ ಜೀವನದ ಪ್ರಥಮ ಚಿತ್ರ ಪ್ರಹ್ಲಾದ ಎಂದು ಡಾ| ರಾಜ್‌ಕುಮಾರ್, ದೀಪಾವಳಿ ಸಂಚಿಕೆ (೧೯೬೩)ಯೊಂದಕ್ಕೆ ನೀಡಿದ ಬರಹದಲ್ಲಿ ತಿಳಿಸಿದ್ದಾರೆ. ನಂತರ ೧೯೫೨ರಲ್ಲಿ ಮಹಾತ್ಮ ಪಿಕ್ಚರ್ಸ್‌ರವರ ತಯಾರಿಕೆಯಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಋಷಿಯೊಬ್ಬನ ಪಾತ್ರ ಸಿಕ್ಕಿತು. ಸಪ್ತ ಋಷಿಗಳಲ್ಲಿ ಒಬ್ಬರಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಒಂದೇ ಒಂದು ಸಂಭಾಷಣೆ ಹೇಳುವ ಅವಕಾಶ ದೊರಕಿತು. ಬಿಡುಗಡೆಯಾದ ನಂತರ ಚಿತ್ರದಲ್ಲಿ ಸಂಭಾಷಣೆ ಇತ್ತೋ ಇಲ್ಲವೋ ಎಂಬುದು ರಾಜಕುಮಾರ್ ಅವರಿಗೂ ನೆನಪಿಲ್ಲ. ೧೯೫೪ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ನಾಯಕ. ನಿರ್ದೇಶಕ ಎಚ್. ಎಲ್. ಎನ್. ಸಿಂಹ ಅವರಿಂದ ಮುತ್ತುರಾಜ್‌ಗೆ “ರಾಜ್‌ಕುಮಾರ್” ಎಂಬ ಹೊಸ ಹೆಸರಿನ ನಾಮಕರಣ. ಒಡಹುಟ್ಟಿದವರು (೧೯೯೪) ವರೆಗೆ ೨೦೫ ಚಿತ್ರಗಳ ಜನಪ್ರಿಯ ನಾಯಕ ನಟರಾಗಿ ರಾಜ್‌ಕುಮಾರ್ ಕನ್ನಡಿಗರ ಕಣ್ಮಣಿ. (ಇತ್ತೀಚಿನ ಶಬ್ದವೇಧಿ ಡಾ| ರಾಜ್‌ಕುಮಾರ್ ಅವರ ೨೦೬ನೇ ಚಿತ್ರವಾಗಿದೆ).
ಮೈಸೂರು ಜಿಲ್ಲೆ ಚಾಮರಾಜನಗರದ (ಈಗ ಚಾಮರಾಜನಗರವೇ ಜಿಲ್ಲೆಯಾಗಿದೆ) ಬಳಿ ಇರುವ ದೊಡ್ಡ ಗಾಜನೂರಿನಲ್ಲಿ ೧೯೨೯ರ ಏಪ್ರಿಲ್ ೨೪ರಂದು ಮುತ್ತುರಾಜನ ಜನನ. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಎಂದರೆ ಆ ಕಾಲದಲ್ಲಿ ರಂಗಭೂಮಿಯ ದೊಡ್ಡ ಹೆಸರು. ರೌದ್ರಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತು. ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ವಹಿಸುತ್ತಿದ್ದರು. ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ : “ಇಂತಹ ಸಾಧನೆ ನಿನ್ನಿಂದ ಸಾಧ್ಯ” ಎಂದು ಪುಟ್ಟಸ್ವಾಮಯ್ಯನವರು ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು. “ನನ್ನ ತಂದೆ ರಂಗದ ಮೇಲೆ ಹುರಿಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು” ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲು ಪ್ರಿಯ. ನಾನೂ ಅದೇ ರೀತಿ ಮಾಡಬೇಕೆಂದು “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ. ಆದರೆ ಬರಲಿಲ್ಲ ಎಂದು ಹೇಳುತ್ತಾರೆ. ೧೯೪೨ರಲ್ಲಿ ತಯಾರಾದ `ಪ್ರಹ್ಲಾದ’ ಚಿತ್ರದಲ್ಲಿ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಹಿರಣ್ಯಕಶಿಪು ಪಾತ್ರದಲ್ಲಿ ಅಭಿನಯಿಸಿದ್ದರು. ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ “ಕೃಷ್ಣಲೀಲಾ” ನಾಟಕದಲ್ಲಿ ಸಣ್ಣ ಪಾತ್ರ ದೊರೆತ್ತಿತ್ತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ. ವಿ. ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ “ಅಂಬರೀಷ” ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು. ಅನಂತರ “ಕುರುಕ್ಷೇತ್ರ” ನಾಟಕದಲ್ಲಿ ತಂದೆ ಭೀಮನಾದರೆ ಮಗ ಅರ್ಜುನ. ರಾಜ್‌ಕುಮಾರ್‌ಗೆ ಇದು ರಂಗತಾಲೀಮು. ೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ.
ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ “ಭೂ ಕೈಲಾಸ” ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
೧೯೫೪ರಲ್ಲಿ ಗುಬ್ಬಿ ಕರ್ನಾಟಕ ಫಿಲಂಸ್ ಅವರು ಬೇಡರ ಕಣ್ಣಪ್ಪ ಚಿತ್ರ ತಯಾರಿಸುವ ಸಲುವಾಗಿ ನಾಯಕನ ಶೋಧನೆಯಲ್ಲಿದ್ದರು. ಗುಬ್ಬಿ ವೀರಣ್ಣ ಹಾಗೂ ಎಚ್. ಎಲ್. ಎನ್. ಸಿಂಹ ಅವರುಗಳು ಮುತ್ತುರಾಜ್‌ನನ್ನು ಆಯ್ಕೆ ಮಾಡಿ ಸ್ಕ್ರೀನ್ ಟೆಸ್ಟ್‌ಗಾಗಿ ಮದರಾಸಿಗೆ ಕಳುಹಿಸಿದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಒಬ್ಬರ ಉದಯದ ಕಾಲ ಸನ್ನಹಿತವಾಗುತ್ತಿತ್ತು. “ಬೇಡರ ಕಣ್ಣಪ್ಪ” ಪಾತ್ರ ಅಭಿನಯಿಸಲು ಮುತ್ತುರಾಜ್ ಆಯ್ಕೆ ನಡೆಯಿತು. ಮುಂದಿನದು ಇತಿಹಾಸ. ಚಿತ್ರ ಶತದಿನ ಓಡಿತು. ಎಲ್ಲೆಡೆ ಸನ್ಮಾನ. ರಾಜ್‌ಕುಮಾರ್ ಅಭಿನಯದ ಪ್ರಶಂಸೆ. ಇದು ಕನ್ನಡದಲ್ಲಿ ತಾರಾಮೌಲ್ಯ ಉದಯಕ್ಕೂ ಕಾರಣವಾಯಿತು. ಬೇಡರ ಕಣ್ಣಪ್ಪ ರಾಷ್ಟ್ರೀಯ ಪ್ರಶಸ್ತಿಗಳಿಸಿದ ಮೊದಲ ಚಿತ್ರವಾಗಿಯೂ ದಾಖಲೆಯಲ್ಲಿ ಸೇರಿತು. ಸೋದರಿ (೧೯೫೫), ೧೯೫೬ರಲ್ಲಿ ಭಕ್ತ ವಿಜಯ, ಹರಿಭಕ್ತ ಹಾಗೂ ಓಹಿಲೇಶ್ವರ ಚಿತ್ರಗಳಲ್ಲಿ ಅಭಿನಯಿಸಿದ ರಾಜ್‌ಕುಮಾರ್ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಸರಿಸಾಟಿಯಿಲ್ಲದ ಅಭಿನಯ ನೀಡಿದರು. ಮೊದಲು ಮೂರು ವರ್ಷಗಳೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದರಿಂದಾಗಿ ೧೯೫೭ರಲ್ಲಿ ತೆರೆಕಂಡ ರಾಯರ ಸೊಸೆ ಚಿತ್ರದ ಬಗ್ಗೆ ಎಲ್ಲರಲ್ಲೂ ಸಹಜವಾಗಿಯೇ ಕುತೂಹಲವಿತ್ತು. ರಾಜ್‌ಕುಮಾರ್ ಸಾಮಾಜಿಕ ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ಕೌತುಕವಿತ್ತು. ಇದು ರಾಜ್‌ಕುಮಾರ್ ಅಭಿನಯದ ಮೊದಲ ಸಾಮಾಜಿಕ ಚಿತ್ರವಾಯಿತು.
ಇದರಲ್ಲೂ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಯಿತು. ರಾಜ್‌ಕುಮರ್‌ಗೆ ಆನಂತರ ಹಿನ್ನಡೆಯೇ ಇಲ್ಲ. ಅಣ್ಣ ತಂಗಿ, ಚಂದವಳ್ಳಿಯ ತೋಟ, ದೂರದ ಬೆಟ್ಟ, ಮೇಯರ್ ಮುತ್ತಣ್ಣ, ಮಣ್ಣಿನ ಮಗ ಮೊದಲಾದ ಚಿತ್ರಗಳಲ್ಲಿ ಗ್ರಾಮೀಣ ಬದುಕಿನ ನೈಜ ಚಿತ್ರಣ ಅಭಿನಯ ಕಂಡುಬಂದರೆ, ಸಂಧ್ಯಾರಾಗ, ನಾಂದಿ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಜೀವನ ಚೈತ್ರಗಳಲ್ಲಿ ಮನ ಮಿಡಿಯುವ ಅಭಿನಯ ನೀಡಿದ್ದಾರೆ. ಭೂ ಕೈಲಾಸದ ರಾವಣ, ಮಹಿಷಾಸುರ ಮರ್ದಿನಿಯಲ್ಲಿ ಮಹಿಷಾಸುರ, ಸತಿಶಕ್ತಿಯಲ್ಲಿ ರಕ್ತಾಕ್ಷ, ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶಿಪು ದಾನವ ಪಾತ್ರಗಳನ್ನು ವಹಿಸಿಕೊಂಡು ತಮ್ಮ ಅಭಿನಯ ಸಾಮರ್ಥ್ಯ ಮೆರೆದಿದ್ದಾರೆ. ಇಮ್ಮಡಿ ಪುಲಕೇಶಿ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ, ಮಯೂರ ಐತಿಹಾಸಿಕ ಚಿತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಸತ್ಯ ಹರಿಶ್ಚಂದ್ರ, ಪುರಂದರದಾಸ, ಸಂತ ತುಕಾರಾಂ, ಕನಕದಾಸ, ಮಂತ್ರಾಲಯ ಮಹಾತ್ಮೆ, ಸರ್ವಜ್ಞ, ಕವಿರತ್ನ ಕಾಳಿದಾಸಗಳ ಮೂಲಕ ಭಕ್ತಿ ಪಾತ್ರಗಳ ತಲ್ಲೀನತೆಯನ್ನು ತೋರಿಸಿದ್ದಾರೆ. ಜೇಡರ ಬಲೆ ಮೂಲಕ ಸಿ. ಐ. ಡಿ. ೯೯೯ ತರಹದ ಬಾಂಡ್ ಪಾತ್ರಗಳಲ್ಲೂ ತಮ್ಮ ಅಭಿನಯ ಸಾಮರ್ಥ್ಯವನ್ನು ವಿಸ್ತರಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಅಭಿನಯದ ೨೦೦ ಚಿತ್ರಗಳಲ್ಲೂ ವೈವಿಧ್ಯಮಯ ಅಭಿನಯ ಕಾಣಬಹುದು.
ಭಾಗ್ಯದ ಬಾಗಿಲು (೧೯೬೮) ಚಿತ್ರದ ಮೂಲಕ ಶತಚಿತ್ರಗಳನ್ನು ರಾಜ್‌ಕುಮಾರ್ ಪೂರೈಸಿದಾಗ ಅದುವರೆಗೆ ವರನಟ ಎಂದು ಕರೆಸಿಕೊಳ್ಳುತ್ತಿದ್ದ ಅವರು “ನಟ ಸಾರ್ವಭೌಮ”ರಾದರು. ಶತಚಿತ್ರಗಳಲ್ಲಿ ಅಭಿನಯಿಸಿದ ಪ್ರಥಮ ನಟ ಎಂಬ ಕೀರ್ತಿಯೂ ಇವರದಾಯಿತು. ಈ ಸಂದರ್ಭದಲ್ಲಿ ನಾಡಿನಾದ್ಯಂತ ಸನ್ಮಾನಗಳ ಸುರಿಮಳೆ. ಇವರ ಅಭಿನಯದ ನೂರು ಚಿತ್ರಗಳ ತುಣುಕುಗಳನ್ನೂ ಸೇರಿಸಿ “ನಟ ಸಾರ್ವಭೌಮ” ಎಂಬ ಚಿತ್ರ ತಯಾರಿಸಿದ್ದು ನಟನೊಬ್ಬನಿಗೆ ಸಂದ ಗೌರವ. ಗಂಧದ ಗುಡಿ (೧೯೭೩) ಚಿತ್ರದ ಮೂಲಕ ರಾಜ್‌ಕುಮಾರ್ ೧೫೦ ಚಿತ್ರಗಳನ್ನು ಪೂರೈಸಿದ ನಟರೆನಿಸಿದಾಗ ಅವರನ್ನು ಸನ್ಮಾನಿಸಿ “ರಸಿಕರ ರಾಜ” ಬಿರುದು ನೀಡಲಾಯಿತು. ನಂತರದ ದಿನಗಳಲ್ಲಿ ರಾಜಕುಮಾರ್ ಅವರನ್ನು ಹುಡುಕಿ;ಕೊಂಡು ಬಾರದ ಪ್ರಶಸ್ತಿಗಳಿಲ್ಲ. ರಾಜ್ ಅಭಿಮಾನಿಗಳ ಸಂಖ್ಯೆ ಬೃಹತ್ತಾಗಿ ಬೆಳೆಯಿತು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ೧೯೮೩ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ” ನೀಡಿ ಗೌರವಿಸಿತು. ೧೯೯೩ರಲ್ಲಿ ರಾಜ್ಯ ಸರ್ಕಾರ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಿತು. ೧೯೯೬ರಲ್ಲಿ “ಫಾಲ್ಕೆ ಪ್ರಶಸ್ತಿ”ಯ ಕಿರೀಟ. ದೇವತಾ ಮನುಷ್ಯ (೧೯೮೯) ಚಿತ್ರದ ಮೂಲಕ ರಾಜಕುಮಾರ್ ೨೦೦ ಚಿತ್ರಗಳ ಅಭಿನಯ ಪೂರೈಸಿದರು. (ಅಂಕಿ ಅಂಶಗಳ ಪ್ರಕಾರ ಶಿವ ಮೆಚ್ಚಿದ ಕಣ್ಣಪ್ಪ ಅವರ ೨೦೦ನೇ ಚಿತ್ರವಾಗುತ್ತದೆ. ಆದರೆ ಆ ಚಿತ್ರದಲ್ಲಿ ಗೌರವ ನಟರಾಗಿರುವುದರಿಂದ ಅದನ್ನು ದಾಖಲೆಗೆ ಪರಿಗಣಿಸದೆ “ದೇವತಾ ಮನುಷ್ಯ” ಚಿತ್ರವನ್ನೇ ೨೦೦ನೇ ಚಿತ್ರ ಎಂದು ಹೆಸರಿಸಲಾಗುತ್ತಿದೆ.)
ರಾಜ್‌ಕುಮರ್ ಅಭಿನಯಸಿದ ಬಂಗಾರದ ಮನುಷ್ಯ (೧೯೭೨) ಚಲನಚಿತ್ರರಂಗದಲ್ಲೇ ಒಂದು ದಾಖಲೆ ನಿರ್ಮಿಸಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ದಿನವಹಿ ೩ ಪ್ರದರ್ಶನಗಳಲ್ಲಿ ೭೭ ವಾರ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು. ನಂತರ ಕೆಂಪೇಗೌಡ ಚಿತ್ರಮಂದಿರದಲ್ಲಿ ಬೆಳಗಿನ ಆಟದಲ್ಲಿ ಮುಂದುವರೆದು ೧೦೪ ವಾರಗಳ ಕಾಲ ಪ್ರದರ್ಶನಗೊಂಡಿತು. ಈ ದಾಖಲೆಯನ್ನು ಬೇರೆ ಯಾವ ಚಿತ್ರವೂ ಸರಿಗಟ್ಟಿಲ್ಲ. ರಾಜ್‌ಕುಮಾರ್ ತ್ರಿಪಾತ್ರಗಳಲ್ಲಿ ಅಭಿನಯಿಸಿದ ಶಂಕರ ಗುರು ಮತ್ತೊಂದು ದಾಖಲೆ ನಿರ್ಮಿಸಿದ ಚಿತ್ರ. ಸತತವಾಗಿ ಒಂದು ವರ್ಷ ಕಾಲ ನಡೆದು ಈ ಚಿತ್ರ ಇತಿಹಾಸ ಸೃಷ್ಟಿಸಿತು. ನಂತರದ ದಿನಗಳಲ್ಲಿ ಆ ರೀತಿಯ ದಾಖಲೆ ಅವರದೇ ಅಭಿನಯದ ಜೀವನ ಚೈತ್ರ ದ್ದಾಗಿದೆ. ರಾಜ್‌ಕುಮಾರ್ ಅವರ ಯಶಸ್ಸಿನಲ್ಲಿ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ ಅವರ ಪಾತ್ರವೂ ಬಹಳ ಮುಖ್ಯವಾದದ್ದು. ಚಲನಚಿತ್ರ ತಯಾರಿಕಾ ಸಂಸ್ಥೆ ಸ್ಥಾಪಿಸಿ, ಮಹತ್ವದ, ಉತ್ತಮ ಕಥಾ ವಸ್ತುಗಳಿರುವ ಚಿತ್ರಗಳನ್ನು ತಯಾರಿಸುತ್ತಿರುವ, ವಿತರಣಾ ಕ್ಷೇತ್ರದಲ್ಲಿಯೂ ಇರುವ ಶ್ರೀಮತಿ ಪಾರ್ವತಮ್ಮ ಚಿತ್ರರಂಗದಲ್ಲಿ ಗಣ್ಯ ನಿರ್ಮಾಪಕಿ ಎನಿಸಿದ್ದಾರೆ.
ರಾಜ್‌ಕುಮಾರ್ ಹಿನ್ನಲೆಗಾಯಕರೂ ಆಗುವ ಮೂಲಕ ವಾಕ್ಚಿತ್ರ ಪರಂಪರೆಯಲ್ಲಿ ಆರಂಭಕಾಲದ ಕೊಂಡಿಯನ್ನು ಉಳಿಸಿಕೊಂಡಿದ್ದಾರೆ. ವಾಕ್ಚಿತ್ರದ ಆರಂಭ ಕಾಲಕ್ಕೆ ಎಂ. ವಿ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರರಾವ್, ಕೆಂಪರಾಜ್, ಹೊನ್ನಪ್ಪ ಭಾಗವತರ್ ಎಲ್ಲರೂ ನಾಯಕ ನಟರೂ ಆಗಿದ್ದರಲ್ಲದೆ, ತಮ್ಮ ಪಾತ್ರದ ಹಾಡುಗಳನ್ನು ತಾವೇ ಹಾಡಬೇಕಿತ್ತು. ಆ ಕಾಲದಲ್ಲಿ ಅಭಿನಯದ ಜತೆಗೆ ಕಂಠ ಕೂಡ ಕಲಾವಿದನೊಬ್ಬನಿಗೆ ಬಹಳ ಅಗತ್ಯ ಅರ್ಹತೆಯಾಗಿತ್ತು. ಆದರೆ ರಾಜ್‌ಕುಮಾರ್ ಚಿತ್ರರಂಗ ಪ್ರವೇಶಿಸುವ ವೇಳೆಗೆ (೧೯೫೪) ಹಿನ್ನಲೆಗಾಯಕರು ಕಾಣಿಸಿಕೊಂಡಿದ್ದರು. ಹಲವಾರು ಸಂಗೀತ ನಿರ್ದೇಶಕರೂ ಇದ್ದರು. ಹೀಗಾಗಿ ರಾಜ್‌ಕುಮಾರ್ ಅವರಿಗೆ ಮೊದಲ ಚಿತ್ರದಲ್ಲೇ ಹಾಡುವ ಅವಕಾಶ ದೊರಕಲಿಲ್ಲ. ಆರಂಭದ ರಾಜ್‌ಕುಮಾರ್ ಚಿತ್ರಗಳಲ್ಲಿ ಟಿ.ಎಂ.ಸೌಂದರರಾಜನ್, ಶೀರ್ಕಾಳಿ ಗೋವಿಂದರಾಜನ್, ಎಂ. ಎಂ. ರಾಜಾ ಮೊದಲಾದವರು ಹಿನ್ನಲೆ ಗಾಯಕರಾಗಿದ್ದರು. ನಂತರ ಪಿ. ಬಿ. ಶ್ರೀನಿವಾಸ್ ಅವರು ರಾಜ್‌ಕುಮಾರ್ ಪಾತ್ರಗಳಿಗೆ ಹಾಡಲಾರಂಭಿಸಿದ್ದು ಹೊಸ ಬೆಳವಣಿಗೆಯಾಯಿತು. ಪಿ. ಬಿ. ಶ್ರೀನಿವಾಸ್ ಅವರ ಕಂಠ ರಾಜ್‌ಕುಮಾರ್ ಅವರಿಗೆ ಕರಾರುವಕ್ಕಾಗಿ ಹೊಂದಿಕೆಯಾಗುತ್ತಿದ್ದುದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿಯಾಯಿತು.
೧೯೭೪ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಬೆಳವಣಿಗೆ. ರಾಜ್‌ಕುಮಾರ್ ಗಾಯಕರಾಗಿ ಯಶಸ್ವಿಯಾದದ್ದು. ಆ ಹಾಡು ಅಭಿಮಾನಿಗಳಿಗೆ ಬಹಳ ಇಷ್ಟವಾದದ್ದು. ಸಂಪತ್ತಿಗೆ ಸವಾಲ್ ಚಿತ್ರಕ್ಕಾಗಿ ರಾಜ್‌ಕುಮಾರ್ “ಯಾರೇ ಕೂಗಾಡಲಿ ಊರೇ ಹೋರಾಡಲಿ… ನಿನ್ನ ನೆಮ್ಮದಿಗೆ ಭಂಗವಿಲ್ಲ… ಎಮ್ಮೇsss ನಿನಗೆ ಸಾಟಿಯಿಲ್ಲ….” ಎಂದು ಹಾಡಿದರು. ಇದು ಅಪಾರ ಜನಪ್ರಿಯತೆ ಪಡೆಯಿತು. ನಟನಾಗಿ ರಾಜ್‌ಕುಮಾರ್ ಎಷ್ಟು ಜನಪ್ರಿಯರೋ, ಗಾಯಕರಾಗಿಯೂ ಈಗ ಅಷ್ಟೇ ಜನಪ್ರಿಯ. ಜಿ. ಕೆ. ವೆಂಕಟೇಶ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ತಮ್ಮ ಪ್ರಥಮ ಗೀತೆ ಹಾಡಿದರು. ಆ ಪರಂಪರೆ ಹಾಗೆಯೇ ಮುಂದುವರೆಯಿತು. ಹಾಗೆ ನೋಡಿದರೆ ರಾಜ್‌ಕುಮಾರ್ ಹಾಡಿರುವುದು ಇದೇ ಮೊದಲೇನಲ್ಲ. ೧೯೫೯ರಲ್ಲಿ “ಮಹಿಷಾಸುವ ಮರ್ದಿನಿ” ಚಿತ್ರದಲ್ಲಿ ರಾಜ್‌ಕುಮಾರ್ ಅವರು ಯುಗಳ ಗೀತೆಯೊಂದನ್ನು ಹಾಡಿದ್ದಾರೆ. ಈ ಚಿತ್ರಕ್ಕೂ ಜಿ. ಕೆ. ವೆಂಕಟೇಶ ಅವರೇ ಸಂಗೀತ ನಿರ್ದೇಶಕರು. ೧೯೫೬ರಲ್ಲಿ ಹರಿಭಕ್ತ ಚಿತ್ರದಲ್ಲಿ ಮಧ್ಯಮಾವತಿ ಮತ್ತು ಮೋಹನರಾಗದಲ್ಲಿ ಶ್ಲೋಕವೊಂದನ್ನು ಹಾಡಿದ್ದಾರೆ. ೧೯೫೬ರಲ್ಲಿಯೇ ಓಹಿಲೇಶ್ವರ ಚಿತ್ರದಲ್ಲಿ ಘಂಟಸಾಲ ಅವರು ರೆಕಾರ್ಡಿಂಗ್‌ಗೆ ಬರಲಾಗದ್ದರಿಂದ ಶರಣು ಶಂಭೋ… ಎಂಬ ಶ್ಲೋಕವನ್ನೂ ಜಿ. ಕೆ. ವೆಂಕಟೇಶ, ರಾಜ್‌ಕುಮಾರ್ ಅವರಿಂದಲೇ ಹಾಡಿಸಿದರು.
೧೯೬೨ರಲ್ಲಿ ದೇವಸುಂದರಿ ಎಂಬ ಚಿತ್ರದಲ್ಲಿ ರಾಜ್‌ಕುಮಾರ್ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಈ ಹಾಸ್ಯ ಗೀತೆಯನ್ನು ರಾಜ್‌ಕುಮಾರ್, ಸರೋಜಿನಿ ಪಟ್ಟಾಭಿ ಹಾಡಿದ್ದರು. ಆನಂತರ ರಾಜ್‌ಕುಮಾರ್ ಬೇರೆ ಯಾವ ನಟನಿಗೂ ಕಂಠದಾನ ಮಾಡಿಲ್ಲ. ತಮ್ಮ ಪುತ್ರ ಶಿವರಾಜ್‌ಕುಮಾರ್ ಅವರಿಗೆ ೧೯೯೪ರಲ್ಲಿ ರಾಜ್‌ಕುಮಾರ್ ಕಂಠದಾನ ಮಾಡಿದ್ದಾರೆ. ಗಂಧದ ಗುಡಿ ಭಾಗ-೨ ಚಿತ್ರದಲ್ಲಿ “ನಾವಾಡುವ ನುಡಿಯೇ ಕನ್ನಡ ನುಡಿ” ಹಾಗೂ “ಸಮರ” (೧೯೯೫) ಚಿತ್ರದಲ್ಲಿನ ಹಾಡನ್ನು ಶಿವರಾಜ್‌ಕುಮಾರ್ ಅವರಿಗಾಗಿಯೇ ಹಾಡಿದ್ದಾರೆ. ಕುಮಾರ್ ಬಂಗಾರಪ್ಪ ಅವರಿಗಾಗಿ ಅಶ್ವಮೇಧದಲ್ಲಿ ಹಾಡಿದ್ದಾರೆ. ತಾವೇ ನಾಯಕನಟನಾಗಿ, ತಮ್ಮ ಹಾಡುಗಳನ್ನು ತಾವೇ ಹಾಡುತ್ತಾ ವಾಕ್ಚಿತ್ರ ಆರಂಭಕಾಲದ ಪರಂಪರೆಯನ್ನು ಈಗಲೂ ಎತ್ತಿ ಹಿಡಿದಿರುವ ಭಾರತದ ಏಕೈಕ ನಟ ರಾಜ್‌ಕುಮಾರ್ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಿರುವ ಅವರ ಮತ್ತೊಬ್ಬ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಈ ನಾಯಕ-ಗಾಯಕ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಅವರು ನಾಯಕನಾಗಿರುವ ಎಲ್ಲ ಚಿತ್ರಗಳಿಗೂ ಅವರೇ ಹಿನ್ನಲೆ ಗಾಯಕರು.
ಸಂಪತ್ತಿಗೆ ಸವಾಲ್ ಎಮ್ಮೆ ಹಾಡಿನ ನಂತರ ಮಯೂರ ಎಂಬ ಐತಿಹಾಸಿಕ ಚಿತ್ರದಲ್ಲಿ “ನಾನಿರುವುದೆ ನಿಮಗಾಗಿ” ಎಂದು ಹಾಡಿ ಮತ್ತಷ್ಟು ಜನಪ್ರಿಯರಾದರು. ಆನಂತರದ ದಿನಗಳಲ್ಲಿ ಅವರ ಎಲ್ಲ ಚಿತ್ರದಲ್ಲೂ ಹಿನ್ನಲೆಗಾಯನ ಅವರ ಪಾಲಿನದೇ ಆದವು. ತಮ್ಮ ಹಾಡುಗಳಿಗೆ ಶಾಸ್ತ್ರಿಯ ಸಂಗೀತದ ಸ್ಪರ್ಶವನ್ನೂ ಅವರು ನೀಡುವುದರಿಂದಾಗಿ ಜೀವನ ಚೈತ್ರದ ಹಾಡುಗಳು ಜನಪ್ರಿಯವಾದವು. ಈ ಚಿತ್ರದ ಹಿನ್ನಲೆ ಗಾಯನಕ್ಕಾಗಿ ಅವರು ೧೯೯೨ರ ಸಾಲಿನ ಕೇಂದ್ರ ಸರ್ಕಾರದ ಶ್ರೇಷ್ಠ ಹಿನ್ನಲೆ ಗಾಯಕ ಪ್ರಶಸ್ತಿಯನ್ನೂ ಪಡೆದರು.
ಸಾಮಾಜಿಕ ಕಾಳಜಿ, ಕಳಕಳಿಯನ್ನು ಸಂದರ್ಭ ಬಂದಾಗಲೆಲ್ಲಾ ರಾಜ್‌ಕುಮಾರ್ ವ್ಯಕ್ತಪಡಿಸಿದ್ದಾರೆ. ೧೯೬೨ರಲ್ಲಿ ಪ್ರವಾಹ ಪರಿಹಾಹ ನಿಧಿ ಸಂಗ್ರಹ ಕಾರ್ಯಕ್ಕೆ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡ ದಿನಗಳಿಂದ ಆರಂಭಿಸಿ, ೧೯೯೬ ರಲ್ಲಿ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಕನ್ನಡ ಚಿತ್ರಗಳಿಗೆ ಚಲನಚಿತ್ರಮಂದಿರಗಳನ್ನು ಒದಗಿಸಬೇಕೆಂಬ ಚಳವಳಿಯವರೆಗೆ ಅವರು ಮುಂಚೂಣಿಯಲ್ಲೇ ಇದ್ದಾರೆ. ೧೯೮೨ರಲ್ಲಿ ಗೋಕಾಕ್ ವರದಿ ಜಾರಿಗೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆದ ಚಳವಳಿಯ ನೇತೃತ್ವವನ್ನು ರಾಜ್‌ಕುಮಾರ್ ವಹಿಸಿದ್ದರು. ಚಳವಳಿಗೆ ಗಂಭೀರ ಸ್ವರೂಪ ಬಂದದ್ದು ಡಾ| ರಾಜ್‌ಕುಮಾರ್ ಚಳವಳಿಗೆ ಧುಮುಕಿದಾಗಲೇ. ರಾಜ್‌ಕುಮಾರ್ ಒಂದು ಶಕ್ತಿಯಾಗಿ ಗೋಚರಿಸಿದ್ದೂ ಆಗಲೇ.
ಕೃಪೆ: ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿಮುದ್ರಣ : ೧೯೯೮, ಪುಟ ೨೧೬, ಬೆಲೆ: ೨೭೫ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮.
(೨೦೦೦)

Thursday, 16 May 2013

ನಮ್ಮ ಭಾಷೆಗೆ e-ಭಾಷ್ಯ


- ಡಾ. ಯು. ಬಿ. ಪವನಜ

ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ ಕೆಲಸದಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಭಾಷೆ ಎಲ್ಲಿದೆ? ಸ್ವಲ್ಪ ಪರಿಶೀಲಿಸೋಣ.
“ರಾಮನು ರಾವಣನನ್ನು ಕೊಂದನು”
“ರಮೇಶನು ಒಂದು ಹೊಸ ಕಾರನ್ನು ಕೊಂಡುಕೊಂಡನು”
“ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಲಿದೆ”
ಹೀಗೆ ಹಲವಾರು ವಾಕ್ಯಗಳನ್ನು ನಾವು ಪ್ರತಿನಿತ್ಯ ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. ಪ್ರತಿದಿನ ಪ್ರತಿ ನಿಮಿಷ ಮಾಹಿತಿ ಸ್ಫೋಟ ನಡೆಯುತ್ತಲೇ ಇದೆ. ಸುದ್ದಿಪತ್ರಿಕೆ, ಟಿ.ಇವಿ. ಅಂತರಜಾಲ -ಹೀಗೆ ಹಲವಾರು ಮಾಧ್ಯಮಗಳಿಂದ ನಮ್ಮ ಕಿವಿ ಮೇಲೆ ಮಾಹಿತಿಯ “ಧಾಳಿ” ನಡೆಯುತ್ತಿದೆ. ಈ ಮಾಹಿತಿಯ ಪ್ರಮುಖ ಅಂಗ ಪಠ್ಯರೂಪದಲ್ಲಿದೆ ಅಂದರೆ ವಾಕ್ಯಗಳು. ವಾಕ್ಯಗಳು ಪದಗಳಿಂದಾಗಿವೆ. ಈ ವಾಕ್ಯಗಳನ್ನು ನಮ್ಮ ಮೆದುಳು ಸಹಜವಾಗಿಯೇ ಪದಗಳಾಗಿ ವಿಂಗಡಿಸಿ ಅವುಗಳ ಅರ್ಥವನ್ನು ವಿಶ್ಲೀಷಿಸುತ್ತದೆ. ಎಲ್ಲ ವಾಕ್ಯಗಳನ್ನು ಓದಿ ಇಡಿಯ ಲೇಖನದ ಒಟ್ಟು ಸಾರಾಂಶವನ್ನು ಮೆದುಳು ಗ್ರಹಿಸುತ್ತದೆ. ಈ ಪ್ರಕ್ರಿಯೆ ಮಾನವರಲ್ಲಿ ಸಹಜವಾಗಿ ನಡೆಯುವ ಕ್ರಿಯೆ. ಇದನ್ನೇ ಗಣಕ ಬಳಸಿ ಮಾಡುವಂತಿದ್ದರೆ? ಮಾಹಿತಿ ತಂತ್ರಜ್ಞಾನದ ಈ ವಿಭಾಗಕ್ಕೆ ಸಹಜಭಾಷಾ ಸಂಸ್ಕರಣೆ (Natural Language Processing) ಎಂಬ ಹೆಸರಿದೆ.
ಇದು ಯಾಕೆ ಬೇಕು? ಯಂತ್ರಗಳೇ ಭಾಷೆಯನ್ನು ಅರ್ಥಮಾಡಿಕೊಳ್ಳುವಂತಿದ್ದರೆ ಒಳ್ಳೆಯದಲ್ಲವೇ? ಉದಾಹರಣೆಗೆ ಬ್ಯಾಂಕಿನ ಎಟಿಎಂ ಯಂತ್ರದ ಮುಂದೆ ನಿಂತು ಅದು ತಾನಾಗಿಯೇ ನಿಮ್ಮನ್ನು ಗುರುತಿಸಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಂಡು ಹಣ ನೀಡುವಂತಿದ್ದರೆ ಎಷ್ಟು ಸುಲಭ ಅಲ್ಲವೇ? ಯಂತ್ರದ ಪರದೆಯಲ್ಲಿ ಮೂಡಿಬರುವ ಸಾಲುಸಾಲು ಸಂದೇಶ ಮತ್ತು ನೀಡಬೇಕಾದ ಆದೇಶಗಳ ಗೊಡವೆ ಇಲ್ಲದೆ ಸರಳವಾಗಿ ನಮ್ಮ ಕೆಲಸ ಮುಗಿಸಬಹುದು. ಕುರುಡರು ಗಣಕಕ್ಕೆ ಮಾತುಗಳ ಮೂಲಕವೇ ಆದೇಶ ನೀಡಬಹುದು. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡಬಹುದು. ಹೀಗೆ ಈ ಸಹಜಭಾಷಾ ಸಂಸ್ಕರಣೆಯ ಕ್ಷೇತ್ರದ ಉಪಕಾರಗಳು ಬಹಳಷ್ಟಿವೆ.
ತೀನಂಶ್ರೀಯವರ ವ್ಯಾಕರಣ ಪುಸ್ತಕ ತೆರೆದು ನೋಡಿ. ಎಲ್ಲ ವ್ಯಾಕರಣಗಳೂ ಪ್ರಾರಂಭವಾಗುವುದು ವಾಕ್ಯಗಳನ್ನು ಪದಗಳಾಗಿ ವಿಂಗಡಿಸುವಲ್ಲಿಂದ. “ರಮೇಶ ಬಂದನು” ಎಂಬ ವಾಕ್ಯದಲ್ಲಿ ಎರಡು ಪದಗಳಿವೆ. ಮೊದಲನೆಯ “ರಮೇಶ” ಎಂಬ ಪದ ನಾಮಪದ. ಎರಡನೆಯ “ಬಂದನು” ಎಂಬುದು ಕ್ರಿಯಾಪದ. ಇದನ್ನು ನಾವು ಶಾಲೆಯಲ್ಲಿ ಕಲಿತಿದ್ದೇವೆ. ಇದನ್ನೇ ಗಣಕ ಮೂಲಕ ಮಾಡುವುದು ಸಹಜಭಾಷಾ ಸಂಸ್ಕರಣೆಯ ಪ್ರಥಮ ಹಂತ. ಇದು ಹೇಳಿದಷ್ಟು ಸುಲಭವಲ್ಲ. ಮೊದಲನೆಯದಾಗಿ ಗಣಕದಲ್ಲಿ ಲಕ್ಷಗಟ್ಟಲೆ ಪದಗಳ ಕಣಜವಿರಬೇಕಾಗುತ್ತದೆ. ಈ ಪದಗಳು ಕೇವಲ ಒಂದು ದತ್ತಸಂಚಯದಲ್ಲಿ (database) ಇದ್ದರೆ ಸಾಲದು. ಪ್ರತಿ ಪದಕ್ಕೂ ಅದರ ವ್ಯಾಕರಣಸ್ವರೂಪದ ವಿಂಗಡಣೆ ಆಗಿರಬೇಕು. ಉದಾಹರಣೆಗೆ ರಾಮ <ನಾಮಪದ>, ಓಡು <ಕ್ರಿಯಾಪದ>, ಪುಸ್ತಕ <ನಾಮಪದ>,.. ಇಂತಹ ಸಂಗ್ರಹಕ್ಕೆ corpus ಅರ್ಥಾತ್ ಪಠ್ಯಕಣಜ ಎನ್ನುತ್ತಾರೆ. ಪದಗಳ ವ್ಯಾಕರಣಸ್ವರೂಪದ ವಿಂಗಡಣೆ ಅಥವಾ ಸರಳವಾಗಿ ಹೇಳುವುದಾದರೆ ಪದವಿಂಗಡಣೆಗೆ part of speech tagging ಎನ್ನುತ್ತಾರೆ. ಈ ಮೊದಲ ಹಂತದ ಕ್ರಿಯೆಗೆ ಹಲವಾರು ತಂತ್ರಾಂಶಗಳು ಲಭ್ಯವಿವೆ.
ಇಂಗ್ಲಿಶ್ ಭಾಷೆಯಲ್ಲಿ ಇದು ಅಷ್ಟು ಕಷ್ಟವಿಲ್ಲ. ಕನ್ನಡದ ಸಂದರ್ಭದಲ್ಲಿ ಇದು ತುಂಬ ಕ್ಲಿಷ್ಟ. ಇದಕ್ಕೆ ಕಾರಣ ಸಂಧಿವಿಂಗಡಣೆ. “ಬಹೂಪಯೋಗಿಯಾಗಿದೆ” ಎಂಬ ಪದವನ್ನು ಬಹು + ಉಪಯೋಗಿ + ಆಗಿದೆ ಎಂಬುದಾಗಿ ವಿಂಗಡಿಸಬೇಕು. ಈ ಮೂಲಪದಗಳು ಸೇರಿ ಸಂಯುಕ್ತಪದವಾಗುವ ಸೂತ್ರವು ಗಣಕದಲ್ಲಿ ಇರಬೇಕು. ಇದರ ಜೊತೆ ವಿಭಕ್ತಿ ಪ್ರತ್ಯಯಗಳ ಸೂತ್ರ ಸಿದ್ಧವಿರಬೇಕು. ಯಾವ ಪದ ಎಲ್ಲಿ ಕೊನೆಗೊಳ್ಳುತ್ತದೆ ಯಾವ ಪದ ಎಲ್ಲಿ ಪ್ರಾರಂಭವಾಗುತ್ತದೆ, ಯಾವ ಸಂದರ್ಭದಲ್ಲಿ ಯಾವ ಸಂಧಿಯ ಸೂತ್ರ ಬಳಸಬೇಕು ಎಂಬಿತ್ಯಾದಿ ಅನುಮಾನಗಳನ್ನು ಪರಿಹರಿಸಬೇಕು. ಅನುಮಾನಾಸ್ಪದವಾದ ಹಲವಾರು ಸಂದರ್ಭಗಳನ್ನು ಮೊದಲೇ ಪಠ್ಯಕಣಜದಲ್ಲಿ ದಾಖಲಿಸಿಟ್ಟಿದ್ದರೆ ಒಳ್ಳೆಯದು. ಈ ರೀತಿ ಪದವಿಂಗಡಣೆಯನ್ನು ಒಂದು ಹಂತದಲ್ಲಿ ತಂತ್ರಾಂಶದ ಮೂಲಕ ಮಾಡಿಸಿ ಅನುಮಾನಾಸ್ಪದವಾದವುಗಳನ್ನು ನಂತರ ಮನುಷ್ಯರೇ ಮಾಡಬೇಕು. ಹೀಗೆ ಮಾಡುವಾಗ ತಂತ್ರಾಂಶವನ್ನು “ಕಲಿಯುವ” ಸ್ಥಿತಿಯಲ್ಲಿಟ್ಟುಕೊಂಡು ಮುಂದೆ ಇದೇ ರೀತಿಯ ಸಂದರ್ಭ ಬಂದಾಗ ಈ ಕಲಿಕೆಯ ಅನುಭವವನ್ನು ಬಳಸಬೇಕು.
ಈ ರೀತಿ ವ್ಯಾಕರಣಸ್ವರೂಪ ನಿಗದಿಯನ್ನು ನಮ್ಮ ಭಾಷೆಗೆ ತಂತ್ರಾಂಶಗಳ ಮೂಲಕ ಮಾಡುವುದು ಕಷ್ಟ ಎಂದು ಅನ್ನಿಸಿದರೂ ಅದು ನಿಜವಾಗಿ ನೋಡಿದರೆ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಭಾರತೀಯ ಬಾಷೆಗಳಲ್ಲಿ ಅನುಮಾನಾಸ್ಪದ ಸಂದರ್ಭಗಳು ಕಡಿಮೆ. ಒಂದು ಪದವನ್ನು ನಾವು ಯಾವ ರೀತಿ ಬರೆಯುತ್ತೇವೆಯೋ ಅದೇ ರೀತಿ ಓದುತ್ತೇವೆ. ಇಂಗ್ಲಿಶ್ ಭಾಷೆಯಂತೆ ಬರೆದುದನ್ನು ಯಾವ ರೀತಿ ಉಚ್ಛರಿಸಬೇಕು ಎಂದು ನಮಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಈ ಗುಣವೈಶಿಷ್ಟ್ಯವು ಪಠ್ಯದಿಂದ ಧ್ವನಿಯನ್ನು ಮೂಡಿಸುವಲ್ಲಿ ತುಂಬ ಉಪಯುಕ್ತ. ಎಲ್ಲ ಪದಗಳು, ಅವುಗಳ ಸಂಯುಕ್ತಗಳು, ಅವುಗಳನ್ನು ಬೇರೆಬೇರೆ ಧ್ವನಿಯಲ್ಲಿ ಬೇರೆಬೇರೆ ಭಾವನೆಗಳಲ್ಲಿ ಉಚ್ಛರಿಸುವ ವಿಧಾನಗಳನ್ನು ದತ್ತಸಂಚಯದಲ್ಲಿ ಇಟ್ಟುಕೊಂಡು ಪಠ್ಯದಿಂದ ಧ್ವನಿಗೆ ಬದಲಾವಣೆ ಮಾಡುವ ತಂತ್ರಾಂಶದ ತಯಾರಿ ಮಾಡಬಹುದು.
ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ. ಆತ ಸಂಸ್ಕೃತ ಭಾಷೆಗೆ ವ್ಯಾಕರಣಸ್ವರೂಪ ನಿಗದಿಯ ಸೂತ್ರಗಳನ್ನು ನೀಡಿದ. ಆತನಿಗೆ ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ ಎಂಬ ಹೆಸರೂ ಇದೆ. ದುರದೃಷ್ಟಕ್ಕೆ ಆತನ ಕಾಲದಲ್ಲಿ ಗಣಕ ಮತ್ತು ತಂತ್ರಾಂಶಗಳು ಇರಲಿಲ್ಲ.
ಈಗ ಈ ಸಹಜಭಾಷಾ ಸಂಸ್ಕರಣೆಯ ಇತರೆ ವಿಭಾಗಗಳನ್ನು ಮತ್ತು ಸೌಕರ್ಯಗಳನ್ನು ಸ್ವಲ್ಪ ಪರಿಶೀಲಿಸೋಣ.
ಒಂದು ಪ್ಯಾರ ಅಥವಾ ಸಂಪೂರ್ಣ ಲೇಖನವನ್ನು ಓದಿ ನಾವು ಮನಸ್ಸಿನಲ್ಲಿಯೇ ಅದರ ಸಾರಾಂಶವನ್ನು ಗ್ರಹಿಸಿಕೊಳ್ಳುತ್ತೇವೆ. ಇದನ್ನೇ ತಂತ್ರಾಂಶಗಳ ಮೂಲಕವೂ ಮಾಡಬಹುದು. ದೀರ್ಘವಾದ ಲೇಖನ ಅಥವಾ ವರದಿಯನ್ನು ತಂತ್ರಾಂಶವು ಓದಿ ಕ್ಷಣಮಾತ್ರದಲ್ಲಿ ಅದರ ಸಾರಾಂಶವನ್ನು ನೀಡಬಹುದು. ಪಠ್ಯದಿಂದ ಧ್ವನಿಗೆ ಮತ್ತು ಧ್ವನಿಯಿಂದ ಪಠ್ಯಕ್ಕೆ ಬದಲಾವಣೆ ಮಾಡಬಹುದು. ನಾವು ಮಾತನಾಡಿದುದನ್ನು ಗಣಕವು ಆಲಿಸಿ ಅದನ್ನು ಅರ್ಥ ಮಾಡಿಕೊಂಡು ಅದನ್ನು ಪಠ್ಯಕ್ಕೆ ಬದಲಾವಣೆ ಮಾಡುವ ಸವಲತ್ತು ಕನ್ನಡಕ್ಕೂ ಬಂದಾಗ ನಮ್ಮ ಲೇಖಕರುಗಳಿಗೆ ಖಂಡಿತ ಮಹದಾನಂದವಾಗುವುದರಲ್ಲಿ ಅನುಮಾನವಿಲ್ಲ. ಗಣಕ ಪರದೆಯಲ್ಲಿ ಮೂಡಿಬಂದುದನ್ನು ಓದಿಹೇಳುವ ತಂತ್ರಾಂಶ ಕನ್ನಡಕ್ಕೆ ಲಭ್ಯವಾದಾಗ ಕುರುಡರು ಕನ್ನಡದ ಲೇಖನಗಳನ್ನು, ಅಂತರಜಾಲತಾಣಗಳನ್ನು, ಖ್ಯಾತ ಪುಸ್ತಕಗಳನ್ನು ಎಲ್ಲ ಧ್ವನಿ ಮೂಲಕ ಓದಬಹುದು, ಅಲ್ಲ ಆಲಿಸಬಹುದು.
ಈ ಕ್ಷೇತ್ರದ ಇನ್ನೊಂದು ಪ್ರಮುಖ ಕೊಡುಗೆಯೆಂದರೆ ತಂತ್ರಾಂಶಗಳ ಮೂಲಕ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜಗಳಾದ ಮೈಕ್ರೋಸಾಫ್ಟ್, ಗೂಗ್ಲ್ ಮತ್ತು ಇನ್ನೂ ಹಲವು ಕಂಪೆನಿಗಳು ಸಂಶೋಧನಾ ನಿರತವಾಗಿವೆ. ಬಿಂಗ್ ಮತ್ತು ಗೂಗ್ಲ್ ಶೋಧಕಗಳು ಪ್ರಪಂಚದ ಹಲವು ಭಾಷೆಗಳ ನಡುವೆ ಭಾಷಾಂತರದ ಸೌಲಭ್ಯವನ್ನು ಈಗಾಲೆ ನೀಡಿವೆ. ಸದ್ಯಕ್ಕೆ ಭಾರತೀಯ ಭಾಷೆಗಳಲ್ಲಿ ಹಿಂದಿ ಮಾತ್ರ ಲಭ್ಯವಿದೆ. ಕನ್ನಡವೂ ಮುಂದಕ್ಕೆ ಈ ಪಟ್ಟಿಯಲ್ಲಿ ದಾಖಲಾಗಬಹುದು. ಆದರೆ ಈ ಯಂತ್ರಾನುವಾದ ಅಷ್ಟು ಪರಿಪೂರ್ಣವಲ್ಲ. ಅದರಲ್ಲಿ ಹಲವಾರು ತಪ್ಪುಗಳು ಆಗುವ ಸಾಧ್ಯತೆಯಿದೆ, ಆಗುತ್ತಿದೆ. ತಪ್ಪಾದಾಗ ನಾವು ಆ ತಪ್ಪನ್ನು ಸರಿಪಡಿಸಿದರೆ ತಂತ್ರಾಂಶವು ಅದನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡು ಮಂದೆ ಅದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ.
ನಮ್ಮ ದೇಶದ ಹಲವಾರು ಸಂಶೋಧನಾ ಕೇಂದ್ರಗಳು ಈ ಸಹಜಭಾಷಾ ಕ್ಷೇತ್ರದಲ್ಲಿ ಈಗಾಗಲೆ ಕೆಲಸ ಮಾಡಿವೆ. ಆದರೆ ಒಂದು ದುಃಖದ ಸಂಗತಿಯೆಂದರೆ ಒಬ್ಬರು ಮಾಡಿದ ಕೆಲಸದ ಆಕರಗಳು ಇನ್ನೊಬ್ಬರಿಗೆ ಲಭ್ಯವಿಲ್ಲ. ಈಗಾಗಲೆ ತಿಳಿಸಿದಂತೆ ಈ ಎಲ್ಲ ಕೆಲಸಗಳಿಗೆ ಮೂಲ ಆಕರ ಪಠ್ಯಕಣಜ (corpus). ಇದರಲ್ಲಿ ಹಲವು ವಿಧಗಳಿವೆ. ಕೇವಲ ಪದಗಳು, ವಿಂಗಡಿಸಿದ ಪದಗಳು, ವಾಕ್ಯಗಳು, ಸಂಪೂರ್ಣ ಲೇಖನಗಳು, ಧ್ವನಿಕಣಜ -ಇತ್ಯಾದಿ. ಮೈಸೂರಿನ ಭಾರತೀಯ ಭಾಷೆಗಳ ಸಂಶೋಧನಾ ಕೇಂದ್ರ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈದರಾಬಾದಿನ ಐಐಐಟಿ, ಚೆನ್ನೈನ ಐಐಟಿ, ಇತ್ಯಾದಿ ಸಂಶೋಧನಾ ಕೇಂದ್ರಗಳು ತಮ್ಮದೇ ಆದ ಕಣಜ ನಿರ್ಮಿಸಿವೆ. ಆದರೆ ಒಬ್ಬರು ತಯಾರಿಸಿದ್ದು ಇನ್ನೊಬ್ಬರಿಗೆ ಸುಲಭದಲ್ಲಿ ಲಭ್ಯವಿಲ್ಲ. ಯಾವುದೂ ಅಂತರಜಾಲದಲ್ಲಿ ಇಲ್ಲವೇ ಇಲ್ಲ. ಶಿವಮೊಗ್ಗದಲ್ಲಿ ಒಬ್ಬ ಸಂಶೋಧಕರು ಈ ಕಣಜವನ್ನು ಬಳಸಿಕೊಂಡು ಸಹಜಭಾಷಾಸಂಸ್ಕರಣೆಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಇಚ್ಛಿಸಿದಲ್ಲಿ ಅದು ಅಷ್ಟು ಸುಲಭವಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಸ್ವಪ್ರತಿಷ್ಠೆಗಳ ಸಮಸ್ಯೆ.
ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಭಾಷೆಯ ಪಠ್ಯಕಣಜ (corpus) ತಯಾರಿಸಲು ಪ್ರಾರಂಭಿಸಿದೆ. ಇದು ತಯಾರಾದಾಗ ಕನ್ನಡದಲ್ಲಿ ಸಹಜಭಾಷಾಸಂಸ್ಕರಣೆ ಮಾಡುವವರಿಗೆ ಪ್ರಯೋಜನಕಾರಿಯಾಗಲಿದೆ. ಈ ಪಠ್ಯಕಣಜವು ಅಂತರಜಾಲದ ಮೂಲಕ ಎಲ್ಲರಿಗೂ ಲಭ್ಯವಾಗಲಿ ಎಂದು ಹಾರೈಸೋಣ.
— *** —

ಡಾ| ಶ್ರೀನಿವಾಸ ಹಾವನೂರ ಮತ್ತು ಮುದ್ದಣ

ದಿವಂಗತ ಡಾ| ಶ್ರೀನಿವಾಸ ಹಾವನೂರರು ಸುಮಾರು ನಾಲ್ಕು ದಶಕಗಳ ಹಿಂದೆ ಕನ್ನಡದ ಯಾವುದೇ ತಂತ್ರಾಂಶ ಮಾತ್ರವಲ್ಲ ಫಾಂಟ್ ಮತ್ತು ಕೀಲಿಮಣೆಯ ಸೌಲಭ್ಯಗಳೂ ಇಲ್ಲದಿದ್ದ ಕಾಲದಲ್ಲಿ ದೂರದ ಮುಂಬಯಿಯಲ್ಲಿ ಕುಳಿತು ಮುದ್ದಣನ ಕೃತಿಗಳ ಬಗ್ಗೆ ಗಣಕ ಬಳಸಿ ಮಾಡಿದ ಸಂಶೋಧನೆ ಇಲ್ಲಿ ಪ್ರಸ್ತಾಪಿಸಲೇಬೇಕು. ಅವರು ಮುದ್ದಣನ ಲಭ್ಯವಿದ್ದ ಮತ್ತು ಆತನದೇ ಎಂದು ಸಂಶಯರಹಿತವಾಗಿ ತಿಳಿದಿದ್ದ ಐದು ಗ್ರಂಥಗಳನ್ನು ಗಣಕಕ್ಕೆ ಊಡಿಸಿ ಅವುಗಳನ್ನು ವಿಂಗಡಿಸಿ ಆತ ಬಳಸಿದ ಪದಗಳ ಕೋಶ ಮತ್ತು ಪದಪ್ರಯೋಗಕೋಶ ತಯಾರಿಸಿದರು. ನಂತರ ಆತನ ಪುಸ್ತಕವೇ ಇರಬಹುದೇ ಎಂಬ ಅನುಮಾನವಿದ್ದ ಇನ್ನೊಂದು ಗ್ರಂಥವನ್ನೂ ಗಣಕಕ್ಕೆ ಊಡಿಸಿ ವಿಶ್ಲೇಷಿಸಿ ಅದೂ ಕೂಡ ಆತನದೇ ಎಂಬ ತೀರ್ಮಾನಕ್ಕೆ ಬಂದರು. ಈ ಕೆಲಸವನ್ನು ಅವರು ಕನ್ನಡದ ಪದಗಳನ್ನು ಇಂಗ್ಲಿಶ್ ಲಿಪಿಯಲ್ಲಿ ಗಣಕಕ್ಕೆ ಊಡಿಸಿ ಮಾಡಿದ್ದರು. ಈಗಲಾದರೋ ಕನ್ನಡದ ತಂತ್ರಾಂಶಗಳು, ಕೀಲಿಮಣೆ, ಯುನಿಕೋಡ್ ಮೂಲಕ ಸಂಪೂರ್ಣ ದತ್ತಸಂಗ್ರಹ (database) ಮತ್ತು ಪ್ರೋಗ್ರಾಮ್ಮಿಂಗ್ ಸವಲತ್ತು ಎಲ್ಲ ಇವೆ. ಆದರೂ ಯಾರೂ ಕನ್ನಡದ ಸಂಶೋದನಾ ಕೆಲಸವನ್ನು ಗಣಕ ಬಳಸಿ ಮಾಡುತ್ತಿಲ್ಲ. ಕನ್ನಡ ಸಂಶೋಧಕರು xyz ಅವರ ನಾಟಕಗಳಲ್ಲಿ ಮಹಿಳೆ ಎಂಬಿತ್ಯಾದಿ ಸಂಶೋಧನೆಯಲ್ಲೇ ಮಗ್ನರಾಗಿದ್ದಾರೆ.

[ಕೃಪೆ: ಪ್ರಜಾವಾಣಿ, ಮಾರ್ಚ್ ೬, ೨೦೧೧]

ನನ್ನ ಲೈಬ್ರರಿ


ಅಮಿತ್ ಎಂ. ಎಸ್.

ಮಾಹಿತಿ ತಂತ್ರಜ್ಞಾನದ ಅಲೆ ಭಾರತದಲ್ಲಿ ತೀವ್ರವಾಗಿದ್ದರೂ ಸಾಹಿತ್ಯ ಸಂಬಂಧಿ ವಿಷಯಗಳಲ್ಲಿ ಅದರ ಬೆಳವಣಿಗೆ ತುಸು ನಿಧಾನ. ಅದರಲ್ಲೂ ಬಲು ಜನಪ್ರಿಯವಾಗಿರುವ ಆನ್‌ಲೈನ್ ಲೈಬ್ರರಿಗೆ ನಾವು ವಿದೇಶಿಗರನ್ನೇ ಅವಲಂಬಿಸಿದ್ದೇವೆ. ಗ್ಲೋಬ್ ಎಥಿಕ್ಸ್, ವೈಡರ್‌ನೆಟ್‌ನಂತಹ ಡಿಜಿಟಲ್ ಲೈಬ್ರರಿಗೆ ಚಂದಾದಾರರಾಗಿರುವ ಪುಸ್ತಕ ಪ್ರಿಯರ ಸಂಖ್ಯೆ ನೋಡಿದಾಗಲೇ ಈ ಲೈಬ್ರರಿಯ ಮಹತ್ವ ಅರಿವಾಗುತ್ತದೆ. ಪುಸ್ತಕವನ್ನು ಕೊಳ್ಳುವ ಮತ್ತು ಅದನ್ನು ನಿರ್ವಹಿಸಬೇಕಾಗದ ತೊಂದರೆಗಳಿಲ್ಲದೆ, ಕಾಗದದ ಬಳಕೆಯಿಲ್ಲದೆ, ಬೇಕಾದಾಗ ಕೊಂಡು ಓದುವ ಅತಿ ಸುಲಭದ `ಇ-ಮಾರ್ಗ` ಆನ್‌ಲೈನ್ ಡಿಜಿಟಲ್ ಲೈಬ್ರರಿ. ಭಾರತದಲ್ಲಿಯೂ ಇವುಗಳು ಲಭ್ಯವಿದೆ. ಆದರೆ ಭಾರತದ ಸಾಹಿತ್ಯದ ಆನ್‌ಲೈನ್ ಓದಿಗಾಗಿ ಸಾಹಿತ್ಯ ರಸಿಕರು ವಿದೇಶಿ ಮೂಲದ ಡಿಜಿಟಲ್ ಲೈಬ್ರರಿಗಳನ್ನೇ ಅವಲಂಬಿಸಬೇಕಾಗಿತ್ತು.
ಭಾರತೀಯರದ್ದೇ ಆದ, ಭಾರತೀಯ ಭಾಷೆಗಳಿಗೇ ಮಿಗಿಲಾದ ಮೊಟ್ಟ ಮೊದಲ ಆನ್‌ಲೈನ್ ಡಿಜಿಟಲ್ ಲೈಬ್ರರಿ ಅಸ್ತಿತ್ವಕ್ಕೆ ಬರುತ್ತಿದೆ. ಈ ಜಾಲತಾಣದ ಗ್ರಂಥಾಲಯದ ರೂವಾರಿಗಳು ಕನ್ನಡಿಗರು. ಕನ್ನಡ ಮಾತ್ರವಲ್ಲ, ಭಾರತದ ವಿವಿಧ ಭಾಷೆಗಳಲ್ಲಿ ಈ ಲೈಬ್ರರಿ ತೆರೆದುಕೊಳ್ಳುತ್ತಿದೆ. ಇವೆಲ್ಲವೂ www.meralibrary.comಸೂರಿನಡಿ ಸಿಗಲಿವೆ. ಮೊದಲು ಕನ್ನಡ ಮತ್ತು ಮಲಯಾಳಂನಲ್ಲಿ ಓದುಗರಿಗೆ ಈ ಗ್ರಂಥಾಲಯ ಮುಕ್ತವಾಗಲಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳನ್ನು ತಯಾರಿಸುವ ಅಮೆರಿಕ ಮೂಲದ ಇಂಪಲ್ಸರಿ ಕಂಪೆನಿಯ ಉದ್ಯೋಗಿ ಶಬೀರ್ ಮುಸ್ತಾಫಾ ಈ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ. ಕನ್ನಡದ ಪ್ರಥಮ ಅಂತರ್ಜಾಲ ಪತ್ರಿಕೆ `ವಿಶ್ವಕನ್ನಡ`ದ ಸಂಪಾದಕ ಯು.ಬಿ. ಪವನಜ ಮುಖ್ಯ ಸಂಗ್ರಹಣಾ ಅಧಿಕಾರಿಯಾಗಿದ್ದಾರೆ. ಇವರೊಟ್ಟಿಗೆ ಸುಮಾರು ಹತ್ತು ಜನ ಉತ್ಸಾಹಿಗಳ ತಂಡ ಈ ಮಹತ್ವಾಕಾಂಕ್ಷಿ ಆನ್‌ಲೈನ್ ಡಿಜಿಟಲ್ ಲೈಬ್ರರಿಗೆ ಸುಂದರ ರೂಪ ನೀಡುವ ಕಾರ್ಯದಲ್ಲಿ ನಿರತವಾಗಿದೆ.
ಕನ್ನಡಿಗರಿಗೆ `ನನ್ನಲೈಬ್ರರಿ` (www.nannalibrary.com), ಹಿಂದಿಯಲ್ಲಿ `ಮೇರಾ ಲೈಬ್ರರಿ, ತೆಲುಗಿನಲ್ಲಿ `ನಾಲೈಬ್ರರಿ`, ಮಲಯಾಳಂನಲ್ಲಿ `ಎನ್ಡೆಲೈಬ್ರರಿ` ಹೀಗೆ ಒರಿಯಾ, ತಮಿಳು, ಮರಾಠಿ, ಬೆಂಗಾಲಿ, ಗುಜರಾತಿ, ಹಾಗೂ ಸಂಸ್ಕೃತ ಭಾಷೆಗಳ ಇ-ಪುಸ್ತಕಗಳಿಗೆ ಪ್ರತ್ಯೇಕ ಲೈಬ್ರರಿ ಹಂತಹಂತವಾಗಿ ಆರಂಭಗೊಳ್ಳಲಿದೆ. ಹೀಗಾಗಿ ತಮ್ಮ ನೆಚ್ಚಿನ ಭಾಷೆಯ, ನೆಚ್ಚಿನ ಸಾಹಿತಿಯ ಪುಸ್ತಕವನ್ನು ಕುಳಿತಲ್ಲಿಗೇ ತರಿಸಿಕೊಂಡು ಓದುವ ಅವಕಾಶ ಸಿಗಲಿದೆ. ಸದ್ಯ ಈ ಲೈಬ್ರರಿ ಸೀಮಿತ ಸಂಖ್ಯೆಯ ಪುಸ್ತಕಗಳನ್ನು ಒಳಗೊಂಡಿದೆ. ಕನ್ನಡದ `ನನ್ನ ಲೈಬ್ರರಿ`ಯಲ್ಲಿ ಈಗ ಸುಮಾರು ಹತ್ತು ಸಾವಿರ ಪುಸ್ತಕಗಳಿವೆ. ನವಕರ್ನಾಟಕ, ಅಕ್ಷರ ಪಬ್ಲಿಕೇಷನ್, ರಾಷ್ಟ್ರೋತ್ಥಾನ ಸಾಹಿತ್ಯದ ಕೃತಿಗಳು, ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಯಂಡಮೂರಿ ವೀರೇಂದ್ರನಾಥ್, ಯಶವಂತ ಚಿತ್ತಾಲ ಮುಂತಾದ ಸಾಹಿತಿಗಳ ಪುಸ್ತಕಗಳು ಇಲ್ಲಿವೆ. ಎಸ್.ಎಲ್.ಬೈರಪ್ಪ, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ ಮುಂತಾದ ಸಾಹಿತಿಗಳ ಪುಸ್ತಕಗಳಿಗೆ ಕೆಲಕಾಲ ಕಾಯಬೇಕಾಗುತ್ತದೆ ಎನ್ನುತ್ತಾರೆ ಯು.ಬಿ. ಪವನಜ.
ಪಿಡಿಎಫ್ ಮತ್ತು ಇ-ಪಬ್ ರೂಪದಲ್ಲಿ ಪುಸ್ತಕಗಳು ಲಭ್ಯವಾಗಲಿದೆ. ಇಂಟರ್‌ನೆಟ್ ಬ್ರೌಸರ್‌ವುಳ್ಳವರು, ಸ್ಮಾರ್ಟ್‌ಫೋನ್ ಬಳಕೆದಾರರು, ಟ್ಯಾಬ್ಲೆಟ್ ಹೊಂದಿರುವವರು ಅಂತರ್ಜಾಲ ಪುಸ್ತಕದಂಗಡಿಯ ಗ್ರಾಹಕರಾಗಬಹುದು. ಈ ಡಿಜಿಟಲ್ ಲೈಬ್ರರಿಗಾಗಿ ವಿನೂತನ ಅಪ್ಲಿಕೇಷನ್ ಒಂದನ್ನು ತಯಾರಿಸಲಾಗಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರು, ಟ್ಯಾಬ್ಲೆಟ್ ಪರದೆಯಲ್ಲಿ ಪುಸ್ತಕವನ್ನು ಓದುವ ಬಯಕೆಯುಳ್ಳವರು ಅಪ್ಲಿಕೇಷನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಓದುಗರಿಗೆ ಡಿಜಿಟಲ್ ಲೈಬ್ರರಿ ಹೆಚ್ಚು ಅನುಕೂಲಕಾರಿ. ಯಾವುದೇ ದೇಶದ ಮೂಲೆಯಲ್ಲಿರುವವರು ಯಾವ ವೇಳೆಯಲ್ಲಿ ಬೇಕಾದರೂ ಸುಲಭವಾಗಿ ಲಾಗಿನ್ ಆಗಿ ಪುಸ್ತಕ ಓದಬಹುದು.
ಹೊಸ ಪೀಳಿಗೆಯನ್ನು ಸಾಹಿತ್ಯದೆಡೆಗೆ ಸೆಳೆಯಲು ಡಿಜಿಟಲ್ ಲೈಬ್ರರಿ ಯಶಸ್ವಿಯಾಗುತ್ತದೆ. ಪುಸ್ತಕಗಳನ್ನು ಹಿಡಿದು ಓದಲು ಇಚ್ಛಿಸದ ಇಂದಿನ ಪೀಳಿಗೆಯ ಜನರು ಟ್ಯಾಬ್ಲೆಟ್‌ಗಳ ಮೂಲಕ ಹೆಚ್ಚು ಪುಸ್ತಕಗಳನ್ನು ಓದುತ್ತಾರೆ ಎಂದು ಅವರು ಹೇಳುತ್ತಾರೆ.
ಈ ತಾಣಕ್ಕೆ ಭೇಟಿ ನೀಡುವ ಗ್ರಾಹಕರು ತಮಗೆ ಬೇಕಾದ ಪುಸ್ತಕವನ್ನು ಆಯ್ದುಕೊಳ್ಳಬಹುದು. ಹೀಗೆ ಆಯ್ಕೆ ಮಾಡಿಕೊಂಡ ಪುಸ್ತಕಕ್ಕೆ ಚಂದಾದಾರರಾಗುವ ಅಥವಾ ಅದನ್ನು ಕೊಳ್ಳುವ ಎರಡು ಆಯ್ಕೆಗಳು ಲಭ್ಯವಾಗುತ್ತದೆ. ತಮ್ಮ ವಿವರಗಳನ್ನು ನೀಡಿ ಯೂಸರ್ ಅಕೌಂಟ್ ಸೃಷ್ಟಿಸಿಕೊಳ್ಳಬೇಕು. ಅಕೌಂಟ್ ಸೃಷ್ಟಿ ಯಶಸ್ವಿಯಾದ ನಂತರ ಲಾಗಿನ್ ಆಗಬೇಕು. ಆಯ್ಕೆ ಮಾಡಿಕೊಂಡ ಪುಸ್ತಕವನ್ನು ಎರವಲು ಪಡೆಯುವ/ಕಾದಿರಿಸುವ/ಕೊಳ್ಳುವ ಅವಕಾಶಗಳ ಕಿಟಿಕಿ ತೆರೆದುಕೊಳ್ಳುತ್ತದೆ. ಎರವಲು ಪಡೆಯುವುದಾದರೆ ಬ್ರೌಸರ್‌ನ ಕಸ್ಟಮ್ ರೀಡರ್‌ಗಳನ್ನು ಬಳಸಿ ಓದಬಹುದು. ಪುಸ್ತಕ ಕೊಂಡುಕೊಂಡರೆ ಅಡೋಬ್ ಕಂಟೆಂಟ್ ಸರ್ವರ್ 4 ಡಿಆರ್‌ಎಂ ಫೈಲ್‌ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಓದುಗರಿಗೆ ಮಾತ್ರವಲ್ಲ ಇದು ಲೇಖಕರಿಗೂ ನೆರವಾಗಲಿದೆ. ಚಂದಾದಾರಿಕೆಯ ಅರ್ಧದಷ್ಟು ಮೊತ್ತ ಲೇಖಕರಿಗೆ ಸಂದಾಯವಾಗುತ್ತದೆ. ಆರಂಭಿಕ ಕೊಡುಗೆಯಾಗಿ ಐದು ಪುಸ್ತಕಗಳು ತಿಂಗಳಿಗೆ 200 ರೂಪಾಯಿ, ಆರು ತಿಂಗಳಿಗೆ 1,000 ರೂ ಹಾಗೂ 1 ವರ್ಷಕ್ಕೆ 2 ಸಾವಿರ ರೂ.ಯಿಂದ ಚಂದಾದಾರಿಕೆ ಲಭ್ಯವಿದೆ. ಚಂದಾದಾರಿಕೆಯ ಮೊತ್ತ ಗ್ರಾಹಕ ವಾಸಿಸುವ ಸ್ಥಳದ ಮೇಲೆ ಅವಲಂಬಿತ. ಭಾರತದಲ್ಲಿನ ಹಾಗೂ ವಿದೇಶದಲ್ಲಿನ ಚಂದಾದಾರಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಚಂದಾದಾರಿಕೆ ಗ್ರಾಹಕರು ಕೊಳ್ಳುವ ಪುಸ್ತಕಗಳ ಸಂಖ್ಯೆ ಮತ್ತು ತಿಂಗಳ ಅವಧಿಗೆ ಅನುಗುಣವಾಗಿರುತ್ತದೆ. ಎರವಲು ಪಡೆಯುವ ಜೊತೆಯಲ್ಲಿ ಡಿಜಿಟಲ್ ಕಾಪಿಯನ್ನು ಸಹ ಕೊಳ್ಳಲು ಅವಕಾಶವಿದೆ. ಸಾಮಾನ್ಯವಾಗಿ ಡಿಜಿಟಲ್ ಲೈಬ್ರರಿಯಲ್ಲಿ ಪುಸ್ತಕದ ಪ್ರತಿಗಳಿಗೆ ಮಿತಿಯಿಲ್ಲ. ಆದರೆ ನನ್ನ ಲೈಬ್ರರಿಯಲ್ಲಿ ಪುಸ್ತಕದ ಪ್ರತಿಯ ಲಭ್ಯತೆಯನ್ನು ಮಿತಿಗೊಳಿಸುವ ಸ್ವಾತಂತ್ರ್ಯ ಲೇಖಕರಿಗೆ ಸಿಗಲಿದೆ. ಹೀಗಾಗಿ ಒಂದು ವೇಳೆ ಪುಸ್ತಕದ ಎಲ್ಲಾ ಪ್ರತಿಗಳೂ ಎರವಲು ಪಡೆದುಕೊಂಡ ಕಾರಣಕ್ಕೆ ಲಭ್ಯವಿಲ್ಲದಿದ್ದರೆ, ಆ ಪುಸ್ತಕವನ್ನು ಪಡೆಯಲು ಬಯಸುವವರು, ಅದನ್ನು ಕಾಯ್ದಿರಿಸಿ ನಂತರ ತೆಗೆದುಕೊಳ್ಳಬಹುದು. ಹಾಗೆಯೇ ಮೊದಲು ಪಡೆದ ಪುಸ್ತಕವನ್ನು ಹಿಂದಕ್ಕೆ ಮರಳಿಸಿದ ನಂತರವೇ ಬೇರೆ ಪುಸ್ತಕ ಎರವಲು ಪಡೆಯಲು ಸಾಧ್ಯ.
ಪುಸ್ತಕ ಅಪ್ಲಿಕೇಷನ್‌ನೊಳಗೆ ಮಾತ್ರ ಸಿಗುವುದರಿಂದ ಪುಟಗಳನ್ನು ನಕಲು ಮಾಡಲು ಅಥವಾ ಮುದ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಿಡಿಗೇಡಿಗಳು ಹ್ಯಾಕ್ ಮಾಡಿ ಲೈಬ್ರರಿಯನ್ನು ಹಾಳು ಮಾಡಲು ಸಹ ಸಾಧ್ಯವಾಗದಷ್ಟು ಇದು ಸುರಕ್ಷಿತ ಎನ್ನುತ್ತಾರೆ ಪವನಜ. ಅಕ್ಟೋಬರ್ ವೇಳೆಗೆ `ನನ್ನ ಲೈಬ್ರರಿ`ಯನ್ನು ಜನರಿಗೆ ಮುಕ್ತಗೊಳಿಸುವುದು ಅವರ ಗುರಿ.
(ಕೃಪೆ: ಪ್ರಜಾವಾಣಿ, ಆಗಸ್ಟ್ 19, 2012)

Friday, 10 May 2013

ಬೆಳ್ಳಿ ಪರದೆಯ "ತುತ್ತೂರಿ"


ಬೆಳ್ಳಿ ಪರದೆಯ "ತುತ್ತೂರಿ"


ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸುವ ಬೆರಳೆಣಿಕೆಯ ನಿರ್ದೇಶಕರಲ್ಲಿ ಪಿ. ಶೇಷಾದ್ರಿ ಒಬ್ಬರು. ಮುನ್ನುಡಿ, ಅತಿಥಿ, ಬೇರು, ಇತ್ಯಾದಿ ಉತ್ತಮ ಸದಭಿರುಚಿಯ ಚಿತ್ರಗಳನ್ನು ನೀಡಿರುವ ಶೇಷಾದ್ರಿಯವರಿಂದ ನಿರ್ದೇಶಿಸಲ್ಪಟ್ಟ ಮತ್ತೊಂದು ಉತ್ತಮ ಚಿತ್ರ “ತುತ್ತೂರಿ”. ಇದು ಮಕ್ಕಳ ಚಿತ್ರ. ಮಕ್ಕಳು ಮಾತ್ರವಲ್ಲ, ಮಕ್ಕಳ ಮನಸ್ಸಿನ ದೊಡ್ಡವರು, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾರದ ದೊಡ್ಡವರು – ಹೀಗೆ ಎಲ್ಲರೂ ನೋಡಬಹುದಾದ ಮತ್ತು ನೋಡಲೇ ಬೇಕಾದ ಚಿತ್ರ -”ತುತ್ತೂರಿ”.
ನಗರಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ಇಲ್ಲವೇ ಇಲ್ಲ ಎನ್ನಬಹುದು. ಇರುವ ಕೆಲವೇ ಮೈದಾನಗಳನ್ನು ಪಾರ್ಕುಗಳಾಗಿ ಬದಲಾಯಿಸುತ್ತಿದ್ದಾರೆ. ಹಿಗಾದರೆ ಮಕ್ಕಳು ಎಲ್ಲಿ ಆಡಬೇಕು? ಮನೆಯೊಳಗೇ ಕುಳಿತುಕೊಂಡು ಟಿವಿ ನೋಡುವುದು ಮತ್ತು ಕಂಪ್ಯೂಟರ್‍ ಗೇಮ್ ಆಡುತ್ತ ಕುಳಿತುಕೊಳ್ಳಬೇಕೇ? ಇಂತಹ ಒಂದು ಸಮಕಾಲೀನ ಸಮಸ್ಯೆಯನ್ನು ಕೈಗೆತ್ತಿಕೊಂಡು ಶೇಷಾದ್ರಿಯವರು ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಕಥೆಯ ಸಾರಾಂಶವನ್ನು ಅದರ ಅಂತರಜಾಲ ತಾಣದಲ್ಲಿ ಓದಬಹುದು (ಅದು ಇಂಗ್ಲೀಶಿನಲ್ಲಿದೆ. ಕನ್ನಡ ಚಿತ್ರಕ್ಕೆ ಕನ್ನಡದಲ್ಲಿ ತಾಣ ನಿರ್ಮಿಸಬಹುದಿತ್ತು). ಆದುದರಿಂದ ಕಥೆಯನ್ನು ಇಲ್ಲಿ ನೀಡುತ್ತಿಲ್ಲ.
ಚಿತ್ರದ ನಿರ್ಮಾಪಕಿ ಶ್ರೀಮತಿ ಜಯಮಾಲ. ಛಾಯಾಗ್ರಹಣ ರಾಮಚಂದ್ರ. ಸಂಗೀತ ಹಂಸಲೇಖ. ಕಥೆ ಜೆ ಎಂ ಪ್ರಹ್ಲಾದ. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಚೊಕ್ಕವಾಗಿ ದುಡಿದಿದ್ದಾರೆ. ಚಿತ್ರಕ್ಕೆ ಈಗಾಗಲೇ ಪ್ರಶಸ್ತಿ, ಹೊಗಳಿಕೆಗಳು ಬಂದಿವೆ. ಕಳೆದ ಮೇ ತಿಂಗಳಿನಲ್ಲೇ ಚಿತ್ರ ತಯಾರಾಗಿದ್ದರೂ ಶಾಲೆಗಳಿಗೆ ರಜೆ ಮತ್ತು ಅದೇ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ಹೊಂದಿಸಿಕೊಳ್ಳುವುದಕ್ಕಾಗಿ ಇದರ ಬಿಡುಗಡೆ ಒಂದು ವರ್ಷ ತಡವಾಗಿ ಆಗಿದೆ.
ಚಿತ್ರದ ಸಂಗೀತ ಮಕ್ಕಳಿಗೆ ಖುಶಿ ಕೊಡುವಂತಿದೆ. ಎರಡು ಹಾಡುಗಳು ಮತ್ತೆ ಕೇಳುವಂತಿವೆ. ರಾಮಚಂದ್ರರ ಛಾಯಾಗ್ರಹಣ ಚೆನ್ನಾಗಿದೆ. ಆದರೆ ತಾಯಿ ಸಾಹೇಬದಲ್ಲಿ ತೋರಿದ ಪ್ರತಿಭೆ ಕಾಣಿಸಲಿಲ್ಲ.
ವಿರಾಮದ ತನಕ ಚಿತ್ರದ ಓಟ ಸೊಗಸಾಗಿದೆ. ನಂತರ ನಿರ್ದೇಶನದಲ್ಲಿ ಸ್ವಲ್ಪ ಹಿಡಿತ ಕಡಿಮೆ ಆದಂತೆ ಕಂಡು ಬರುತ್ತದೆ. ಶೇಷಾದ್ರಿಯವರು ಪ್ರಹ್ಲಾದರ ಕಥೆಯನ್ನು ನೇರವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಯಾವುದೇ ತಂತ್ರದ ಬಳಕೆ ಮಾಡಿಲ್ಲ. ನಿರೂಪಣಾ ವಿಧಾನದ ಬಳಕೆಯಿಂದ ಮಕ್ಕಳಿಗೆ ಚಿತ್ರ ನೋಡಲು ಯಾವುದೇ ತೊಡಕು ಉಂಟಾಗದು. ಮಕ್ಕಳಿಗೆ ಖಂಡಿತವಾಗಿಯೂ ಮುದ ನೀಡುವ ಚಿತ್ರ.